ಫೆಬ್ರವರಿಗೆ ಜಿಪಂ, ತಾಪಂ ಎಲೆಕ್ಷನ್ ನಡೆಸಲು ಸಿದ್ಧತೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಶೀಘ್ರದಲ್ಲೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಫೆಬ್ರವರಿ ವೇಳೆಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
2021ರ ಏಪ್ರಿಲ್-ಮೇ ತಿಂಗಳಲ್ಲೇ ಜಿಪಂ ಹಾಗೂ ತಾಪಂ ಸದಸ್ಯರ ಅವಧಿ ಮುಗಿದಿತ್ತು. ಮೂರೂವರೆ ವರ್ಷ ಕಳೆದರೂ ಈ ಚುನಾವಣೆ ಪ್ರಕ್ರಿಯೆ ಶುರು ಮಾಡಿರಲಿಲ್ಲ. ಇದೀಗ ಮುಂದಿನ ಫೆಬ್ರುವರಿಯಲ್ಲಿ ಚುನಾವಣೆ ನಡೆಯುವ ಬಗ್ಗೆ ಉಪಮುಖ್ಯಮಂತ್ರಿ ಸುಳಿವು ನೀಡಿದ್ದಾರೆ. ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಚುನಾವಣೆ ನಡೆದರೆ ಸುಮಾರು 4 ವರ್ಷಗಳ ಬಳಿಕ ಚುನಾವಣೆ ನಡೆದಂತಾಗಲಿದೆ.
ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ, ಮೀಸಲಾತಿ, ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಇದ್ದ ಅಧಿಕಾರವನ್ನು ಹಿಂಪಡೆದ ಬಗ್ಗೆ ಹೈಕೋರ್ಟ್ನಲ್ಲಿ ಪ್ರಶ್ನಿಸಿರುವುದು ಸೇರಿ ವಿವಿಧ ಕಾರಣಗಳಿಂದ ಚುನಾವಣೆ ಮುಂದಕ್ಕೆ ಹೋಗುತ್ತಿದ್ದು, ಕೊನೆಗೂ ಉಪಮುಖ್ಯಮಂತ್ರಿಗಳು ಚುನಾವಣೆ ನಡೆಸುವ ಬಗ್ಗೆ ಮೊದಲ ಬಾರಿಗೆ ಖಚಿತವಾಗಿ ಹೇಳಿದ್ದಾರೆ.
2021ರಿಂದಲೂ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನಲ್ಲಿ ಸದಸ್ಯರಿಲ್ಲದೆ ಆಡಳಿತಾಧಿಕಾರಿಗಳ ದರ್ಬಾರ್ ನಡೆದಿದೆ. ಹೀಗಾಗಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹಾಗೂ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಪಂದನೆ ಸಿಗದೆ ನೆನೆಗುದಿಯಲ್ಲಿವೆ, ಈಗ ಬರುವ ಫೆಬ್ರುವರಿ ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎನ್ನುವ ಮಾಹಿತಿ ಎಲ್ಲರಿಗೂ ಸಮಾಧಾನ ತಂದಿದೆ. ಅಂದು ಕೊಂಡ ಹಾಗೆ ಚುನಾವಣೆಗಳು ನಡೆಯಲಿ ಎಂಬುದು ಎಲ್ಲರ ಆಶಯವಾಗಿದೆ.