Oplus_0

ರೈತರ ಜೀವನದೊಂದಿಗೆ ಚೆಲ್ಲಾಟ ಆಡುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮೌನೇಶ್ ಭಂಕಲಗಿ ಆಗ್ರಹ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನಲ್ಲಿ ಬೆಳೆ ಸಮೀಕ್ಷೆಯನ್ನು ಸರಿಯಾಗಿ ಮಾಡದೇ ರೈತರ ಜೀವನದೊಂದಿಗೆ ಚೆಲ್ಲಾಟ ಆಡುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ರೈತರಿಗೆ ಕೂಡಲೇ ಬೆಳೆ ಹಾನಿ ಪರಿಹಾರದ ಸೌಲಭ್ಯ ಒದಗಿಸಿ ಕೊಡಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮೌನೇಶ್ ಭಂಕಲಗಿ ಆಗ್ರಹಿಸಿದ್ದಾರೆ.

‌ಸುದ್ದಿಗಾರರೊಂದಿಗೆ ಮಾತನಾಡಿರ ಅವರು, ನೀರಾವರಿ ಬೆಳೆ ತೋರಿಸುವ ಬದಲು ಒಣ ಬೇಸಾಯ ಬೆಳೆ ದಾಖಲಿಸಿ ಸರ್ಕಾರದ ಬೆಳೆ ಪರಿಹಾರ ಸಿಗದಂತೆ ಮಾಡಿ  ರೈತರ ಜೀವನದ ಜೊತೆ ಗ್ರಾಮ ಆಡಳಿತಾಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ ಕೂಡಲೇ ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳು ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹೊಲದಲ್ಲಿ ತೊಗರಿ ಬೆಳೆ ಇದ್ದರೆ ಹೆಸರು ಬೆಳೆ ಅಂತ ಹಾಗೂ ಉದ್ದು ಬೆಳೆ ಇದ್ದರೆ ತೊಗರಿ ಅಂತ ನಮೂದಿಸಿದ್ದರಿಂದ ರೈತರು ಪರಿಹಾರಕ್ಕಾಗಿ ಪರದಾಡುವಂತಾಗಿದೆ. ಇಲ್ಲಿ ಗ್ರಾಮ ಆಡಳಿತಾಧಿಕಾರಿಗಳ ದಿವ್ಯ ನಿರ್ಲಕ್ಷತನ ಎದ್ದು ಕಾಣುತ್ತಿದೆ ಇಷ್ಟಾದರೂ ತಾಲೂಕು ಆಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ.

ತಾಲೂಕಿನ ಭಂಕಲಗಿ ಗ್ರಾಮದ ರೈತ ಸಣ್ಣ ಬಸಣ್ಣ ಚಂದಪ್ಪ ತೋಟದಲ್ಲಿ ಅಕಾಲಿಕ ಮಳೆ ಹಾಗೂ ಬಿರುಗಾಳಿಯಿಂದ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಇದರ ವಿವರ ದಾಖಲಿಸಲು ಬೆಳೆ ಹಾನಿ ತಂತ್ರಾಂಶದಲ್ಲಿ  ಸಮಸ್ಯೆ ಉಂಟಾಗುತ್ತದೆ ಎಂದು ನೆಪ ಹೇಳಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಳೆದ ಮೇ.25 ರಂದು ತಹಸೀಲ್ದಾರ್ ಅವರಿಗೆ ಪತ್ರ ಬರೆದು ಕೈತೊಳೆದುಕೊಂಡಿದ್ದಾರೆ. ಆದರೆ ಎರಡುವರೆ ಎಕರೆ ತೋಟದಲ್ಲಿ ಕಲ್ಲಂಗಡಿ ಬೆಳೆ ಸಂಪೂರ್ಣ ಹಾನಿಯಾಗಿದ್ದು ಅಂದಾಜು 80 ಸಾವಿರ ಪರಿಹಾರ ಬರಬೇಕಾಗಿತ್ತು ಆದರೆ ಬರೀ ರೂ.6800 ಬಂದಿದೆ ಎಂದು ತಿಳಿಸಿದ್ದಾರೆ. ಈ ಕುರಿತು ವಿಚಾರಿಸಿದರೆ ಮುಂದಿನ ವರ್ಷ ಬರುತ್ತದೆ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಾರಿ ಮಳೆ ಹಾಗೂ ಪ್ರವಾಹದಿಂದಾಗಿ ರೈತರ ಬೆಳೆ ಸಂಪೂರ್ಣ ಹಾನಿಯಾಗಿದ್ದು ಜೀವನ ನಡೆಸುವುದೇ ದುಸ್ತರ ಇರುವಾಗ, ಸರ್ಕಾರ ಬಿಡುಗಡೆ ಮಾಡಿರುವ ಬೆಳೆ ಹಾನಿ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ, ಹೀಗಾಗಿ ಕೂಡಲೇ ಈ ಸಮಸ್ಯೆ ಬಗೆಹರಿಸಿದಿದ್ದರೆ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮೌನೇಶ್ ಭಂಕಲಗಿ ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!