Oplus_0

ಕಾಳಗಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ | ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಲು ಮುತುವರ್ಜಿ ವಹಿಸಿ: ಗುತ್ತೇದಾರ

ನಾಗಾವಿ ಎಕ್ಸ್‌ಪ್ರೆಸ್

ಕಾಳಗಿ: ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಭಿಸಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಕಾಳಗಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ ಅಧಿಕಾರಿಗಳಿಗೆ ತಾಕೀತು ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡುವಂತೆ ಸೂಚಿಸಿದರು.

ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಹಾಗೂ ಸ್ವಾವಲಂಬಿಯಾಗಿ ಜೀವನ ನಡೆಸಲು ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು, ಯೋಜನೆಯ ಸೌಲಭ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಭಿಸಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

ತಾ.ಪಂ ಇಒ ಡಾ. ಬಸಲಿಂಗಪ್ಪ ಡಿಗ್ಗಿ ಮಾತನಾಡಿ, ಅನುಷ್ಠಾನ ಅಧಿಕಾರಿಗಳು ಶೇ.100 ರಷ್ಟು ಪ್ರಗತಿ ಸಾಧಿಸಬೇಕು, ಯೋಜನೆಯಿಂದ ಹೊರಗಿರುವ ಅರ್ಹ ಕುಟುಂಬಗಳನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಭ್ಯಗಳನ್ನು ಕಲ್ಪಿಸಬೇಕು ಎಂದು ಹೇಳಿದರು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಶರಣಪ್ಪ ಮಾತನಾಡಿ, ಡಿಸೆಂಬರ್ 2023 ರಿಂದ ಸೆಪ್ಟೆಂಬರ್ 2025 ರ ವರೆಗೆ ತಾಲೂಕಿನಲ್ಲಿ ಒಟ್ಟು 746 ಫಲಾನುಭವಿಗಳು ಯುವನಿಧಿ ಯೋಜನೆಯಲ್ಲಿ ನೋಂದಣಿಯಾಗಿದ್ದು, ಇಲ್ಲಿಯವರೆಗೆ 1,53,61,500 ಮೊತ್ತ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಕೆಕೆಆರ್‌ಟಿಸಿ ಅಧಿಕಾರಿ ಮಾತನಾಡಿ, ಶಕ್ತಿ ಯೋಜನೆಯಡಿ ಜೂನ 2025 ರಿಂದ ಡಿಸೆಂಬರ್ 2025 ರ ವರೆಗೆ ಆರು ತಿಂಗಳಲ್ಲಿ 23 ಲಕ್ಷ 68 ಸಾವಿರ ಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದು, ಒಟ್ಟು 12.16 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರ ಟಿಕೆಟ್ ಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಆಹಾರ ಇಲಾಖೆ ಅಧಿಕಾರಿ ರೇವಣಸಿದ್ದಯ್ಯ ಮಠಪತಿ ಮಾತನಾಡಿ, ತಾಲೂಕಿನಲ್ಲಿ ಗ್ರಾಮೀಣ 47, ನಗರ-4, ಒಟ್ಟು 51 ನ್ಯಾಯಬೆಲೆ ಅಂಗಡಿಗಳು ಇವೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಒಟ್ಟು 22,525 ಫಲಾನುಭವಿಗಳು ಯೋಜನೆ ಲಾಭ ಪಡೆದಿದ್ದಾರೆ ಎಂದು ತಿಳಿಸಿದರು.

ಜೆಸ್ಕಾಂ ಅಧಿಕಾರಿ ಮಹ್ಮದ ಇಲಿಯಾಸ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ 2023 ರಿಂದ 2026 ಜನೆವರಿ ವರೆಗೆ ತಾಲೂಕಿನಲ್ಲಿ ಒಟ್ಟು 3,45,018 ಫಲಾನುಭವಿಗಳು ಯೋಜನೆ ಲಾಭವನ್ನು ಪಡೆದಿದ್ದಾರೆ ಎಂದು ಹೇಳಿದರು.

ಸಿಡಿಪಿಓ ಆರತಿ ತುಪ್ಪದ್ ಮಾತನಾಡಿ, ಗೃಹ ಲಕ್ಷ್ಮಿ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 18,648 ಅರ್ಹ ಫಲಾನುಭವಿಗಳಗೆ ಸೆಪ್ಟೆಂಬರ್ 2025 ರ ವರೆಗೆ ಡಿಬಿಟಿ ಮುಖಾಂತರ ಹಣ ಪಾವತಿಯಾಗಿದೆ ಎಂದು ತಿಳಿಸಿದರು.

ಪಂಚ ಗ್ಯಾರಂಟಿಗಳಾದ ಗೃಹಜ್ಯೋತಿ, ಗೃಹ ಲಕ್ಷ್ಮಿ, ಯುವನಿಧಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಮಟ್ಟದ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ಗ್ಯಾರಂಟಿ ಸಮಿತಿ ಸದಸ್ಯರಾದ ಮಹ್ಮದ ಘುಡುಸಾಬ್ ಕಲ್ಯಾಣರಾವ ಡೊಣ್ಣೂರು, ಧಿನೇಶ ಮೊಘಾ, ಜಗನ್ನಾಥ ಪೂಜಾರಿ ತೇಗಲತಿಪ್ಪಿ, ಗೀತಾ ಸಿಂಗಶೆಟ್ಟಿ, ಗೋದಾವರಿ ಕಂದಗೋಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಣ್ ಶೃಂಗೇರಿ ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!