ಚಿತ್ತಾಪುರದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಸಿಯೂಟ ನೌಕರರ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಕ್ಷರ ದಾಸೊಹ (ಬಿಸಿಯೂಟ) ನೌಕರರು ಅತೀ ಕಡಿಮೆ ವೇತನದಲ್ಲಿ ಅತೀ ಹೆಚ್ಚು ಅವಧಿ ಕೆಲಸವನ್ನು ಮಾಡುತ್ತಿದ್ದು ಅವರಿಗೆ ಸರ್ಕಾರವು ನೀಡಿರುವ ಭರವಸೆಯಂತೆ 6 ಸಾವಿರ ವೇತನ ನಿಗದಿ ಮಾಡಬೇಕು ಎಂದು ಅಕ್ಷರ ದಾಸೋಹ ಸಂಘದ ರಾಜ್ಯಾಧ್ಯಕ್ಷೆ ಮಹಾದೇವಿ ನಿಂಬಾಳ ಒತ್ತಾಯಿಸಿದರು.
ಪಟ್ಟಣದ ಅಂಬೇಡ್ಕರ ವೃತ್ತದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದ ನಂತರ ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದ ಅವರು, ಬೇರೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಟ ವೇತನ ನಿಗದಿ ಮಾಡಲಾಗಿದೆ. ನಾವುಗಳು ಬೆಳಿಗ್ಗೆ ಶಾಲೆ ಆರಂಭಕ್ಕೂ ಅರ್ಧಗಂಟೆ ಮುಂಚೆ ಬಂದು ಶಾಲೆ ಸ್ವಚ್ವತೆ ಮಾಡಿ ಮಕ್ಕಳಿಗೆ ಹಾಲು ಹಾಗೂ ಊಟ ತಯಾರಿಸಲು ಎರಡರಿಂದ ಮೂರು ಗಂಟೆ ಸಮಯವಾಗುತ್ತದೆ. ನಂತರ ಅಡುಗೆ ಬಡಿಸಿ ಸ್ವಚ್ಚಗೊಳಿಸುವುದರಲ್ಲಿ 6 ರಿಂದ 7 ಗಂಟೆ ಕೆಲಸ ಆಗುತ್ತಿದೆ ಇಷ್ಟಾದರೂ ಕೂಡಾ ನಮಗೆ ಕನಿಷ್ಟ ವೇತನ ನಿಗದಿ ಮಾಡದೇ ಅನ್ಯಾಯ ಮಾಡಲಾಗುತ್ತಿದೆ ಎಂದರು.
ಕೂಡಲೇ ಸರ್ಕಾರವು ಅನ್ಯಾಯಕ್ಕೆ ಒಳಗಾಗಿರುವ ಬಿಸಿಯೂಟ ನೌಕರರಿಗೆ ಖಾಯಂ ಆಗುವ ತನಕ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸಾದಿಲ್ವಾರು ಜಂಟಿ ಖಾತೆ ಜವಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಗೆ ನೀಡಬೇಕು. ನಿವೃತ್ತಿ ಹೊಂದಿದ ನೌಕರರಿಗೆ 2 ಲಕ್ಷ ಇಡಗಂಟು ಕೊಡಬೇಕು. ಕೆಲಸದ ಸ್ಥಳದಲ್ಲಿ ಮರಣ ಹೊಂದಿದ ಬಿಸಯೂಟ ನೌಕರರಿಗೆ 25 ಲಕ್ಷ ಪರಿಹಾರ ನೀಡಬೇಕು ಹಾಗೂ ಅಪಘಾತದಲ್ಲಿ ಮರಣ ಹೊಂದಿದ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು. ಬೇಸಿಗೆ ಮತ್ತು ದಸರಾ ರಜೆಗಳಲ್ಲಿ ವೇತನವನ್ನು ಕಡ್ಡಾಯವಾಗಿ ನೀಡಬೇಕು. ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿರುವ ನೌಕರರಿಗೆ ದಿನ ಭತ್ಯೆ ನೀಡಬೇಕು ಎನ್ನುವ ಬೇಡಿಕೆಗಳಿಗೆ ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳವರ ಮೂಲಕ ಉಪ ನಿರ್ದೆಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಅವರಿಗೆ ಮನವಿ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರೆ, ಅಕ್ಷರ ದಾಸೋಹ ಸಂಘದ, ಜಿಲ್ಲಾಧ್ಯಕ್ಷೆ ಮುಕ್ತಾ ಚಂದಾ, ಸುನಿತಾ ಕುಂಬಾರ, ಕಲ್ಪನಾ ಕಲ್ಲಕ್ಕ್, ಸುವರ್ಣ ಶಾಂಪುರಹಳ್ಳಿ, ವೈಶಾಲಿ ಕೊಂಕನಳ್ಳಿ, ಶರಣಮ್ಮ ಕಾಶಿ, ಸಿದ್ದಮ್ಮ ಎಡಗಿ, ದಸಂಸ ವಿಭಾಗೀಯ ಸಂಚಾಲಕ ಉದಯಕುಮಾರ ಸಾಗರ, ಶಿವಮೂರ್ತಿ ಪಾಮನೂರ, ನಾಗೇಂದ್ರ ಬುರ್ಲಿ, ಭೀಮರಾಯ ಕೊಂಚೂರ, ನವಾಬ್ ಮುನ್ಷಿ ಸೇರಿದಂತೆ ಇತರರು ಇದ್ದರು.
