ಕನ್ನಡ ಶಾಲೆ ಉಳಿಸಿ–ಬೆಳೆಸಿ ಅಭಿಯಾನದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಅಣ್ಣಾರಾಯ ಇವಣಿ ನೇಮಕ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಾಡು–ನುಡಿ ಹಾಗೂ ಸರ್ಕಾರಿ ಕನ್ನಡ ಶಾಲೆಗಳ ಸಂರಕ್ಷಣೆಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ “ಕನ್ನಡ ಶಾಲೆ ಉಳಿಸಿ–ಬೆಳೆಸಿ” ಅಭಿಯಾನಕ್ಕೆ ಹೊಸ ಚೈತನ್ಯ ದೊರೆತಿದ್ದು, ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಅಣ್ಣಾರಾಯ ವಿ. ಇವಣಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ತಿಳಿಸಿದ್ದಾರೆ.
ಕನ್ನಡ ಶಾಲೆಗಳ ಉಳಿವಿಗಾಗಿ ಜನಜಾಗೃತಿ ಮೂಡಿಸುವುದು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವುದು ಹಾಗೂ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದೊಂದಿಗೆ ಈ ಅಭಿಯಾನ ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯ ರಾಜ್ಯ ನಾಯಕರು, ಹಿರಿಯರು ಹಾಗೂ ಕಾರ್ಯಕರ್ತರ ಒಮ್ಮತದ ನಿರ್ಧಾರದಂತೆ ಅಣ್ಣಾರಾಯ ವಿ. ಇವಣಿ ಅವರಿಗೆ ಈ ಮಹತ್ವದ ಜವಾಬ್ದಾರಿ ವಹಿಸಲಾಗಿದೆ.
ಕನ್ನಡ ಶಾಲೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಾಡು–ನುಡಿ ಉಳಿಸುವ ಹೋರಾಟದಲ್ಲಿ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿಯೇ ಮಾದರಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ನೂತನ ಜಿಲ್ಲಾಧ್ಯಕ್ಷ ಅಣ್ಣಾರಾಯ ವಿ. ಇವಣಿ ತಿಳಿಸಿದ್ದಾರೆ.
ರಾಜ್ಯಮಟ್ಟದ ಅಭಿಯಾನದ ಉದ್ದೇಶಗಳಿಗೆ ತಕ್ಕಂತೆ ಕಲಬುರಗಿ ಜಿಲ್ಲೆಯಲ್ಲಿ ಕನ್ನಡ ಶಾಲೆಗಳ ಬಲವರ್ಧನೆಗಾಗಿ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

