ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಸುಳ್ಳು ಪೋಕ್ಸೋ ಪ್ರಕರಣವನ್ನು ಹಿಂಪಡೆಯುವಂತೆ ಆಗ್ರಹಿಸಿ ಕೋಲಿ ಸಮಾಜ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲರೋಜ್ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಸುಳ್ಳು ಪೋಕ್ಸೋ ಪ್ರಕರಣವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ತಾಲೂಕು ಕೋಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ತಾಲೂಕು ಯುವ ಅಧ್ಯಕ್ಷ ರಾಜೇಶ್ ಹೊಳಿಕಟ್ಟಿ ಮಾತನಾಡಿ, ಮಲ್ಲಿಕಾರ್ಜುನ ಮುತ್ಯಾ ಅವರು ಭಕ್ತರ ಪಾಲಿನ ಆರಾಧ್ಯದೇವರಾಗಿದ್ದಾರೆ. ಅಪಾರ ಸಂಖ್ಯೆಯ ಭಕ್ತರು ಅವರ ಶ್ರೀಮಠಕ್ಕೆ ಬಂದು ದರ್ಶನ ಪಡೆಯುವುದು ಅಲ್ಲಿನ ಸಂಪ್ರದಾಯವಾಗಿದೆ. ಸುಳ್ಳು ಪ್ರಕರಣ ದಾಖಲಿಸಿ ಅದಕ್ಕೆ ಪ್ರೋತ್ಸಾಹ ನೀಡಿರುವ ಅಧಿಕಾರಿಗಳ ವಿರುದ್ಧ ಮತ್ತು ಬಾಲಕಿಯ ಕುಟುಂಬದ ಮಾನ ಹರಾಜು ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗೌರವಾಧ್ಯಕ್ಷ ರಾಮಲಿಂಗ ಬಾನರ್ ಮಾತನಾಡಿ, ಮಠಕ್ಕೆ ಬಂದಿದ್ದ ಬಾಲಕಿಯೊಬ್ಬಳನ್ನು ಮಲ್ಲಿಕಾರ್ಜುನ ಮುತ್ಯಾ ಅವರು ಒಬ್ಬ ತಂದೆ ತನ್ನ ಮಕ್ಕಳಿಗೆ ತೋರುವ ಮಕ್ಕಳ ಮೇಲಿನ ಸಹಜ ಪ್ರೀತಿ ತೋರಿಸಿದ್ದಾರೆ. ಬಾಲಕಿಯ ತಾಯಿ, ತಂದೆ, ಚಿಕ್ಕಪ್ಪ ಆ ಸಂದರ್ಭದಲ್ಲಿ ಇದ್ದು ತಮ್ಮ ಬಾಲಕಿಗೆ ಮುತ್ಯಾ ಅವರು ತೋರಿದ ಪ್ರೀತಿ ಕಂಡು ಸಂಭ್ರಮಿಸಿ ಸಂತೋಷಪಟ್ಟಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ವಿಡಿಯೋದ ಸತ್ಯಾಸತ್ಯತೆಯನ್ನು ಅರಿತುಕೊಳ್ಳದೆ, ಪರಿಶೀಲನೆಗೆ ಸೂಚಿಸದೆ ಶ್ರೀಗಳ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿರುವುದು ಕಾನೂನು ಬಾಹಿರವಾಗಿದೆ. ಬಾಲಕಿಯ ಕುಟುಂಬದ ಮಾನ, ಮರ್ಯಾದೆ, ಘನತೆ, ಗೌರವಕ್ಕೆ ಧಕ್ಕೆ ತಂದು ಸಾರ್ವಜನಿಕವಾಗಿ ಕಳಂಕ ತಂದಿಟ್ಟಿ ತಪಿತಸ್ಥರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಳ್ಳದೆ ಕಡೆಗಣಿಸಿದರೆ ಯಾದಗಿರಿ ಚಲೋ ಚಳುವಳಿ ಹಮ್ಮಿಕೊಂಡು ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಮುಖಂಡರಾದ ಸುರೇಶ ಬೆನಕನಳ್ಳಿ, ಮಲ್ಲಿಕಾರ್ಜುನ ಎಮ್ಮೆನೋರ್, ಹಣಮಂತ ಸಂಕನೂರ್, ಭೀಮಣ್ಣ ಹೊತ್ತಿನಮಡು, ಮಲ್ಲಿಕಾರ್ಜುನ ಅಲ್ಲೂರಕರ್, ದೇವಿಂದ್ರ ಅರಣಕಲ್, ರಾಮಲಿಂಗ ಅಲ್ಲೂರ್, ದಶರಥ ದೊಡ್ಡಮನಿ, ನಾಗೇಂದ್ರ ಜೈಗಂಗಾ, ಕರಣಕುಮಾರ ಅಲ್ಲೂರ್, ಪ್ರಭು ಹಲಕರ್ಟಿ, ಮೈಪಾಲ್ ಹೊಸೂರ್, ದತ್ತು ಮೈನಾಳಕರ್, ರಾಜಾ ಹುಲಿ, ಭಾಗಣ್ಣ ಹಲಕಟ್ಟಿ, ಭೀಮು ಚಾಮನೂರ, ಗೂಳಿ ಡಿಗ್ಗಿ ಸೇರಿದಂತೆ ಇತರರು ಇದ್ದರು.

