ಮೊಗಲಾ-ರಾಜೇಶ್ರೀ ಸಿಮೆಂಟ್ ಕಂಪನಿ ಗೇಟ್ ರಸ್ತೆ ನಿರ್ಮಾಣಕ್ಕೆ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಮೊಗಲಾ ಗ್ರಾಮದಿಂದ ಕೇವಲ 3 ಕಿ.ಮೀ ಸಮೀಪವಿರುವ ರಾಜೇಶ್ರೀ ಸಿಮೆಂಟ್ ಕಂಪನಿ ಮಳಖೇಡವರೆಗೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಗ್ರಾಮದ ಮುಖಂಡರಾದ ವೀರಭದ್ರಪ್ಪ ಇವಣಿ ಮತ್ತು ದೇವಿಂದ್ರಪ್ಪ ಅಲ್ಲೂರ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಕಳೆದ ಮೂರ್ನಾಲ್ಕು ವರ್ಷಗಳಿಂದ ಹಲವಾರು ಬಾರಿ ಸಚಿವರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಮೊಗಲಾದಿಂದ ಕೇವಲ 3 ಕಿ.ಮೀ. ಸಮೀಪದಲ್ಲಿರುವ ರಾಜೇಶ್ರೀ ಸಿಮೆಂಟ್ ಕಂಪನಿ ಗೇಟ್‌ವರೆಗೆ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದೆ. ರಸ್ತೆ ಇಲ್ಲದೇ ಇರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಸದರಿ ರಸ್ತೆ ಅನುಕೂಲದಿಂದ ಗ್ರಾಮದ ರೈತರ ಹೊಲಗಳಿಗೆ ಹೋಗಲು-ಬರಲು ಮತ್ತು ಕಂಪನಿಯಲ್ಲಿ ಕೆಲಸ ಮಾಡುವ ನೌಕರರಿಗೂ ಅನುಕೂಲವಾಗುತ್ತದೆ. ಅಲ್ಲದೆ ನಮ್ಮ ಗ್ರಾಮದಿಂದ ಕೇವಲ 10-12 ಕಿ.ಮೀ ಸಮೀಪದಲ್ಲಿರುವ ಸೇಡಂ ಕ್ಷೇತ್ರಕ್ಕೂ ಕೂಡ ಹೋಗಲು-ಬರಲು ಅನುಕೂಲವಾಗುತ್ತದೆ. ಆದ್ದರಿಂದ ತಕ್ಷಣ ಇದನ್ನು ಪರಿಶೀಲಿಸಿ, ಮೊಗಲಾ ದಿಂದ ರಾಜೇಶ್ರೀ ಸಿಮೆಂಟ್ ಕಂಪನಿ ಗೇಟ್ (ಮಳಖೇಡ) ವರೆಗೆ ರಸ್ತೆಯ ಅನುಕೂಲ ಮಾಡಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

