ಮುತ್ತಗಾ ಅಂಬಿಗರ ಚೌಡಯ್ಯ ಮೂರ್ತಿ, ಸುತ್ತು ಗೋಡೆ ನಿರ್ಮಾಣಕ್ಕೆ 5 ಲಕ್ಷ ಅನುದಾನ | 8 ದಿನಗಳ ಒಳಗಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸದಿದ್ದರೆ ವಿಧಾನ ಸೌಧದ ಎದುರು ಸತ್ಯಾಗ್ರಹ: ಕಮಕನೂರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತಕ್ಷೇತ್ರದ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ ಮೂರ್ತಿ ಭಗ್ನಗೊಳಿಸಿ ಅವಮಾನಿಸಿದ ಕಿಡಿಗೇಡಿಗಳನ್ನು 8 ದಿನಗಳ ಒಳಗಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸದಿದ್ದರೆ ವಿಧಾನ ಸೌಧದ ಎದುರು ಸತ್ಯಾಗ್ರಹ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಎಚ್ಚರಿಸಿದರು.
ಮುತ್ತಗಾ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಭಗ್ನಗೊಂಡ ಅಂಬಿಗರ ಚೌಡಯ್ಯ ಮೂರ್ತಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ಮೂರ್ತಿಗಾಗಿ ವೈಯಕ್ತಿಕವಾಗಿ ನಗದು 1 ಲಕ್ಷ ಹಾಗೂ ಸುತ್ತು ಗೋಡೆ ನಿರ್ಮಾಣಕ್ಕೆ ಎಂಎಲ್ಸಿ ನಿಧಿಯಲ್ಲಿ 4 ಲಕ್ಷ ಅನುದಾನ ಸೇರಿದಂತೆ ಒಟ್ಟು 5 ಲಕ್ಷ ಅನುದಾನ ನೀಡುವುದಾಗಿ ಹೇಳಿದರು. ತಕ್ಷಣ ಅನುದಾನ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಬರೆದ ಪತ್ರವನ್ನು ಗ್ರಾಮದ ಮುಖಂಡರಿಗೆ ನೀಡಿದರು.
ಮೂರ್ತಿ ವಿರೂಪಗೊಳಿಸಿ ಅವಮಾನಿಸಿರುವುದು ಇದೊಂದು ಅಮಾನುಷ ಕೃತ್ಯ, ಶಾಂತಿ ಸೌಹಾರ್ದತೆ ಕಧಡುವ ಹುನ್ನಾರ ಆಗಿದೆ ಹಾಗೂ ಸಮಾಜದಲ್ಲಿ ದ್ವೇಷ ಹುಟ್ಟಿಸುವ ಕುತಂತ್ರ ಅಡಗಿದೆ ಎಂದರು.
ನಾನು ಅಧಿವೇಶನದಲ್ಲಿ ಈಗಾಗಲೇ ವಿಧಾನ ಸೌಧದ ಎದುರು ಅಂಬಿಗರ ಚೌಡಯ್ಯ ಪ್ರತಿಮೆ ಕೂಡಿಸಬೇಕು ಎಂದು ಚರ್ಚೆ ಮಾಡಿದ್ದೇನೆ ಹಾಗೂ ಎಲ್ಲಾ ಶಾಸಕರ ಸಹಕಾರ ಪಡೆದುಕೊಂಡು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮಾಡಲಾಗಿದೆ ಎಂದು ಹೇಳಿದರು. ನಾನು ಸಮಾಜದ ಸಲುವಾಗಿ ಹಾಗೂ ನಿಮ್ಮ ಮನೆಯ ಮಗನಾಗಿ ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
12 ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಎಲ್ಲಾ ಶರಣಸತ್ಪುರುಷರು ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ್ದಾರೆ, ಹೀಗಾಗಿ ಶರಣರು ಯಾವುದೇ ಒಂದು ಜಾತಿಗೆ ಸೀಮಿತರಾಗಿಲ್ಲ, ಇದ್ದದ್ದು ಇದ್ದ ಹಾಗೆ ಹೇಳಿ ನಿಜಶರಣ ಎಂದು ಎನಿಸಿಕೊಂಡಿರುವ ಅಂಬಿಗರ ಚೌಡಯ್ಯನವರ ಮೂರ್ತಿ ಭಂಗ ಮಾಡಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ, ಯುವ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್, ಮುಖಂಡರಾದ ಜಯಪ್ರಕಾಶ್ ಕಮಕನೂರ, ಸಂದೇಶ್ ಕಮಕನೂರ, ಬಸವರಾಜ ಬೂದಿಹಾಳ, ಶರಣಪ್ಪ ನಾಟೀಕಾರ, ಗುಂಡು ಐನಾಪೂರ, ತಮ್ಮಣ್ಣ ಡಿಗ್ಗಿ, ಮೃತ್ಯುಂಜಯ ಹಿರೇಮಠ, ಸಾಬಣ್ಣ ಭರಾಟೆ, ಶರಣು ಅರಣಕಲ್, ತಿಪ್ಪಣ್ಣ ಇವಣಿ, ರಾಜೇಶ್ ಹೋಳಿಕಟ್ಟಿ, ನಾಗರಾಜ್ ಸಂಗಾವಿ, ಮಹಾದೇವ ಅಲ್ಲೂರ, ಪ್ರದೀಪ್ ಕದ್ದರಗಿ, ಮುತ್ತಗಾ ಕೋಲಿ ಸಮಾಜದ ಅಧ್ಯಕ್ಷ ಶಿವರಾಜ್ ನಾಟೀಕಾರ, ಬಸವರಾಜ ಜೀರಕಲ್, ವಿಜಯಕುಮಾರ್ ನಾಟೀಕಾರ, ಸುಧಾಕರ್ ರಾಮಗುಂಡ, ದೇವಣ್ಣ ಹಳ್ಳಿ, ರಾಹುಲ್ ಜೀರಕಲ್, ಮಲ್ಲೇಶಿ ಜೀರಕಲ್ ಸೇರಿದಂತೆ ಸಿಪಿಐಗಳಾದ ನಟರಾಜ್ ಲಾಡೆ ಶಹಾಬಾದ, ಜಗದೇವಪ್ಪ ಪಾಳಾ ಕಾಳಗಿ, ಪಿಎಸ್ಐ ಚಂದ್ರಕಾಂತ ಮಕಾಲೆ ಇದ್ದರು.

