ನಾಗಾವಿ ನಕ್ಷತ್ರ ಪುಸ್ತಕ ಲೋಕಾರ್ಪಣೆ | ಪತ್ರಕರ್ತರು ಅಪ್ರಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿ: ಸಚಿವ ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪತ್ರಕರ್ತರು ಅಪ್ರಾಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ ಸೃಷ್ಠಿಯಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ನಾಗಯ್ಯ ಸ್ವಾಮಿ ಅಲ್ಲೂರ ಗೆಳೆಯರ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿ. ನಾಗಯ್ಯಸ್ವಾಮಿ ಅಲ್ಲೂರ ಅವರ ಕುರಿತಾದ ಸಂಗ್ರಹ ಗ್ರಂಥ “ನಾಗಾವಿ ನಕ್ಷತ್ರ” ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಾಗಯ್ಯಸ್ವಾಮಿ ಅಲ್ಲೂರ ಅತ್ಯಂತ ಪ್ರಾಮಾಣಿಕ ಪತ್ರಕರ್ತರಾಗಿದ್ದರು. ಪ್ರಾಮಾಣಿಕತೆಯನ್ನು ಅವರು ಮೈಗೂಡಿಸಿಕೊಂಡಿದ್ದರು. ಅಂತಹ ಪ್ರಾಮಾಣಿಕತೆ ಅವರನ್ನು ಕೇವಲ ಪತ್ರಿಕಾರಂಗಕ್ಕೆ ಮಾತ್ರ ಸೀಮಿತಗೊಳಿಸದೆ, ಸಾಂಸ್ಕೃತಿಕ, ಸಾಹಿತ್ಯ ಲೋಕದ ಒಬ್ಬ ನಿಷ್ಠಾವಂತ ಬರಹಗಾರರನ್ನಾಗಿ ರೂಪಿಸಿದೆ. ಜನರಿಗಾಗಿ ಹಾಗೂ ಮಕ್ಕಳಿಗಾಗಿ ಅವರು ನೀಡಿದ ಸಮಾಜ ಸೇವೆ ಅವರನ್ನು ಸಮಾಜಮುಖಿ ಚಿಂತಕ ಹಾಗೂ ಶಿಕ್ಷಣ ಪ್ರೇಮಿಯನ್ನಾಗಿ ರೂಪಿಸಿದೆ ಎಂದರು.
ನಾಗಯ್ಯಸ್ವಾಮಿಯಂತ ಪತ್ರಕರ್ತರು ಸಮಾಜದ ಎಲ್ಲ ವರ್ಗದವರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಅವರು ನಮ್ಮೊಂದಿಗೆ ಈಗ ಇಲ್ಲ. ಅವರ ಗೆಳೆಯರ ಬಳಗ ಅವರ ಬಗೆಗಿನ ಪುಸ್ತಕಕ್ಕೆ ನಾಗಾವಿ ನಕ್ಷತ್ರ ಎಂದು ಹೆಸರಿಟ್ಟಿದ್ದಾರೆ. ನಾಗಯ್ಯಸ್ವಾಮಿ ನಿಜ ಅರ್ಥದಲ್ಲಿ ನಕ್ಷತ್ರವಾಗಿದ್ದಾರೆ, ಯುವ ಪತ್ರಕರ್ತರಿಗೆ ಅವರು ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.
ನಾಗಯ್ಯಸ್ವಾಮಿ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಅವರು, ವೇದಿಕೆಯ ಮೇಲಿದ್ದ ಅವರ ಕುಟುಂಬ ವರ್ಗದವರಿಗೆ ಧೈರ್ಯ ತುಂಬಿ, ಕೇವಲ ಅವರ ಸ್ನೇಹಿತರು ಮಾತ್ರವಲ್ಲದೇ ನಾನು ಕೂಡಾ ವೈಯಕ್ತಿಕ ಸಹಾಯ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ್ದ ಕಾಂಗ್ರೆಸ್ ಮುಖಂಡ ನಾಗರೆಡ್ಡಿ ಪಾಟೀಲ ಕರದಾಳ ಅವರ ಮನವಿಯಂತೆ, ನಾಗಾವಿ ನಕ್ಷತ್ರ ಸಂಗ್ರಹ ಗ್ರಂಥವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿ ಬರುವ ಎಲ್ಲ ಗ್ರಂಥಾಲಯಗಳು ಖರೀದಿಸುವಂತೆ ಕ್ರಮವಹಿಸಲಾಗುವುದು ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಅವರ ಸ್ನೇಹಿತ ವಲಯದಲ್ಲಿ ಸಂಗ್ರಹಿಸಲಾದ ರೂ 1.90 ಲಕ್ಷ ಮೊತ್ತದ ಚೆಕ್ ನ್ನು ಸಚಿವರು ಅವರ ಕುಟುಂಬದವರಿಗೆ ವಿತರಿಸಿದರು.
ಹಲಕರ್ಟಿ ಕಟ್ಟಿಮನಿ ಮಠದ ಶ್ರೀ ಮುನೀಂದ್ರ ಶಿವಾಚಾರ್ಯ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಮಾತನಾಡಿದರು.
ಎಎಸ್ಪಿ ಮಹೇಶ್ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ತೊಗರಿ ಮಂಡಳಿ ಅಧ್ಯಕ್ಷ ಮಹಿಮೂದ್ ಸಾಹೇಬ್, ಮಾಜಿ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ನ್ಯಾಯವಾದಿ ಚಂದ್ರಶೇಖರ ಅವಂಟಿ, ಕಾಳಗಿ ತಾಪಂ ಇಓ ಬಸಲಿಂಗಪ್ಪ ಡಿಗ್ಗಿ, ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಜಯಪ್ರಕಾಶ್ ಕಮಕನೂರ, ಪತ್ರಕರ್ತರಾದ ಭವಾನಿ ಸಿಂಗ್ ಠಾಕೂರ್, ವೀರೇಂದ್ರ ಕೊಲ್ಲೂರು, ದೇವಿಂದ್ರಪ್ಪ ಅವಂಟಿ, ಸಿದ್ದಲಿಂಗಯ್ಯ ಸ್ವಾಮಿ, ಸಂಪಾದಕ ಲಿಂಗಪ್ಪ ಮಲ್ಕನ್, ಸಿದ್ದಮ್ಮ ನಾಗಯ್ಯ ಸ್ವಾಮಿ, ಶಿವಾನಂದ ನಾಲವಾರ, ವೀರಭದ್ರಪ್ಪ ಗುರುಮಿಠಕಲ್, ಕಾಶಿರಾಯ ಕಲಾಲ್, ಉಮೇಶ್ ಬಾಬು, ಬಸವರಾಜ ಯಂಬತ್ನಾಳ, ನಟರಾಜ್ ಶಿಲ್ಪಿ, ಸೇರಿದಂತೆ ಹಲವರಿದ್ದರು. ರಾಚಯ್ಯ ಸ್ವಾಮಿ ಅಲ್ಲೂರ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.

