Oplus_0

ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಚಿತ್ತಾಪುರದಲ್ಲಿ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ನೀಟ್ ಯುಜಿ (NEET-UG) ಪರೀಕ್ಷೆಯ ಸರಣಿ ಅಕ್ರಮ ಹಾಗೂ ಅನ್ಯಾಯಗಳನ್ನು ಖಂಡಿಸಿ, ದೆಹಲಿಯಲ್ಲಿ ‘ಪಾರ್ಲಿಮೆಂಟ್ ಚಲೋ’ ಹೋರಾಟವನ್ನು ಬೆಂಬಲಿಸಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ವಿದ್ಯಾರ್ಥಿಗಳು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ದೇಶದ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸು ಮತ್ತು ಭವಿಷ್ಯದೊಂದಿಗೆ ಆಟವಾಡುತ್ತಿರುವ ‘ನೀಟ್’ ಪರೀಕ್ಷಾ ವ್ಯವಸ್ಥೆಯು ಸಂಪೂರ್ಣವಾಗಿ ವಿಫಲವಾಗಿದೆ. ಈ ಬೃಹತ್ ಪರೀಕ್ಷಾ ಅಕ್ರಮಗಳ ಹಿಂದೆ ದೊಡ್ಡ ಮಟ್ಟದ ಮಾಫಿಯಾ ಜಾಲವೇ ಕೆಲಸ ಮಾಡುತ್ತಿದ್ದರೂ, ಹಾಗೂ ಈಗಾಗಲೇ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇಷ್ಟಾದರೂ ಪ್ರಧಾನ ಮಂತ್ರಿಗಳು ಮತ್ತು ಶಿಕ್ಷಣ ಮಂತ್ರಿಗಳು ಒಂದು ಮಾತಾಡದೆ, ಅಪರಾಧಿಗಳ ವಿರುದ್ಧ ಸೂಕ್ತ ಕಠಿಣ ಕ್ರಮ ಕೂಡ ಕೈಗೊಳ್ಳದೆ ಇರುವುದು ನಾಚಿಕೆಯ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದೆಡೆ, ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಮತ್ತು ಅವರ ಸಹವರ್ತಿಗಳನ್ನು ದೆಹಲಿ ಪೊಲೀಸರು ಅಪ್ರಜಾತಾಂತ್ರಿಕವಾಗಿ ಎಳೆದೊಯ್ದುದಿರುವುದು ಅತ್ಯಂತ ಖಂಡನೀಯ. ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಪ್ರತಿಭಟಿಸುವ ಮತ್ತು ತನ್ನ ಹಕ್ಕನ್ನು ಪ್ರತಿಪಾದಿಸುವ ಸಂವಿಧಾನಾತ್ಮಕ ಹಕ್ಕಿದೆ. ಆದರೆ ಸರ್ಕಾರವು ದಮನಕಾರಿ ನೀತಿಯನ್ನು ಬಳಸಿ ಹೋರಾಟಗಾರರ ಹಾಗೂ ಯುವಜನರ ಧ್ವನಿಯನ್ನು ಅಡಗಿಸಲು ಹುನ್ನಾರ ನಡೆಸುತ್ತಿದೆ. ಸರ್ಕಾರ ಕೂಡಲೇ ತನ್ನ ಈ ಧೋರಣೆಯನ್ನು ಬಿಟ್ಟು ವಾಂಗ್ಚುಕ್ ಅವರೊಂದಿಗೆ ಪ್ರಜಾತಾಂತ್ರಿಕ ಸಂವಾದ ಆರಂಭಿಸಬೇಕು ಮತ್ತು NTA ರದ್ದುಪಡಿಸಬೇಕು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಈ ಪ್ರತಿಭಟನೆಯನ್ನು ಎಐಡಿಎಸ್ಓ ಜಿಲ್ಲಾ ಸಮಿತಿ ಸದಸ್ಯರಾದ ದೇವರಾಜ್ ರಾಜೋಳ ನಡೆಸಿಕೊಟ್ಟರು, ಈ ಸಂದರ್ಭದಲ್ಲಿ ತೋಟೆಂದ್ರ, ಸಂಜಯ್, ಶ್ರೀನಿವಾಸ, ಆರೀಫ್, ರೇಡ್ಡೆಪ್ಪೆ, ಮಹೇಶ, ಉಲ್ಲಾಸ್ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!