ಚಿತ್ತಾಪುರ ಪತ್ರಕರ್ತ ದಿ.ನಾಗಯ್ಯ ಸ್ವಾಮಿ ಕುಟುಂಬಕ್ಕೆ 50 ಲಕ್ಷ ಪರಿಹಾರ, ಪಿಡಿಒ ವಿರುದ್ಧ ಕಾನೂನು ಕ್ರಮಕ್ಕೆ ಕಾಳಗಿ ಪತ್ರಕರ್ತರ ಸಂಘ ಆಗ್ರಹ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ಚಿತ್ತಾಪುರ ತಾಲೂಕಿನಲ್ಲಿ 35 ವರ್ಷಗಳಿಂದ ನಿಸ್ವಾರ್ಥ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದ ನಾಗಯ್ಯಸ್ವಾಮಿ ಅಲ್ಲೂರ ಅವರು ಗ್ರಾ.ಪಂ ಪಿಡಿಒ ಒಬ್ಬರ ಬೆದರಿಕೆಯಿಂದ ಘಾಸಿಗೊಂಡು ಸಾವನ್ನಪ್ಪಿದ್ದು, ಸರಕಾರ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು ಹಾಗೂ ಪಿಡಿಒ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಳಗಿ ತಾಲೂಕು ಪತ್ರಕರ್ತರ ಸಂಘದಿಂದ ಶುಕ್ರವಾರ ಗ್ರೇಡ್-1 ತಹಸೀಲ್ದಾರ್ ಘಮಾವತಿ ರಾಠೋಡ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಗದ್ದಿ ಮಾತನಾಡಿ, ಇತ್ತೀಚೆಗೆ ನಿಧನಗೊಂಡ ಚಿತ್ತಾಪುರದ ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರ ಅವರ ಕುಟುಂಬಕ್ಕೆ ಸರಕಾರ 50 ಲಕ್ಷ ಪರಿಹಾರ ನೀಡಬೇಕು ಹಾಗೂ ಪಿಡಿಒ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ತನಿಖೆಗೆ ಆದೇಶಿಸಬೇಕು, ಪತ್ನಿಗೆ ಸರಕಾರಿ ಉದ್ಯೋಗ ನೀಡಬೇಕು ಮತ್ತು ಮಕ್ಕಳ ಶೈಕ್ಷಣಿಕ ವೆಚ್ಚ ಸರಕಾರದಿಂದಲೇ ಭರಿಸಬೇಕೆಂದು ಒತ್ತಾಯಿಸಿದರು.
ವೈದ್ಯರ, ವಕೀಲರ ರಕ್ಷಣೆಗೆ ಯಾವ ರೀತಿ ಕಾನೂನು ರೂಪಿಸಲಾಗಿದೆಯೋ ಅದೇ ಮಾದರಿಯಲ್ಲಿ ಪತ್ರಕರ್ತರ ರಕ್ಷಣೆಗೆ ಕಾನೂನು ರೂಪಿಸಿಬೇಕು, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಕಾಳಗಿ ಗ್ರೇಡ್-1 ತಹಸೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾಳಗಿ ತಾಲೂಕು ಪತ್ರಕರ್ತರಾದ ಸೂರ್ಯಕಾಂತ ಕಟ್ಟಿಮನಿ, ಭೀಮರಾವ ಕುಡ್ಡಳ್ಳಿ, ಶಿವಕುಮಾರ ಗುತ್ತೇದಾರ, ಶರಣಗೌಡ ಭಂಟನಳ್ಳಿ, ಶ್ರೀಶೈಲ್ ತೇಗಲತಿಪ್ಪಿ ಇದ್ದರು.