ಪೇಟಶಿರೂರು ಗ್ರಾಮದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ | ಅಪರಾಧ ಪ್ರಕರಣಗಳ ತಡೆಗೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಸಹಕಾರಿ: ಡಿವೈಎಸ್ಪಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಮಾಜದ ಸುರಕ್ಷತೆ ಹಾಗೂ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸರ ಪಾತ್ರ ಹಿರಿದಾಗಿದ್ದು. ಸಮಾಜದಲ್ಲಿ ಅಪರಾಧ ಪ್ರಕರಣಗಳ ತಡೆಗೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ತುಂಬಾ ಸಹಕಾರಿ ಆಗಲಿದೆ ಎಂದು ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ಮತಕ್ಷೇತ್ರದ ಪೇಟಶಿರೂರು ಗ್ರಾಮದಲ್ಲಿ ಮಾಡಬೂಳ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಸುರಕ್ಷತೆಗಾಗಿ ಮನೆ ಮನೆಗೆ ಪೊಲೀಸ್ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೆಮನೆಗೆ ಪೊಲೀಸ್ ಭೇಟಿ ಕಾರ್ಯಕ್ರಮ ಯಶಸ್ವಿಯಾಗಬೇಕು ಎಂದಾದರೆ ಸಾರ್ವಜನಿಕರ ಸಹಕಾರ ಸಹಭಾಗಿತ್ವ ಅವಶ್ಯಕ ಎಂದು ಹೇಳಿದರು.
ಕರ್ನಾಟಕ ಸರ್ಕಾರವು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ನಿರ್ಮಿಸುವ ಮಹತ್ತರ ಉದ್ದೇಶದಿಂದ ‘ಮನೆ ಮನೆಗೆ ಪೊಲೀಸ್’ ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿದೆ. ಕಾನೂನು ಜಾರಿ ಸಂಸ್ಥೆಗಳು ಮತ್ತು ಸಾರ್ವಜನಿಕರ ನಡುವೆ ವಿಶ್ವಾಸ, ಸುರಕ್ಷತೆ ಮತ್ತು ನೇರ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಸಿಪಿಐ ಜಗದೇವಪ್ಪ ಪಾಳಾ ಮಾತನಾಡಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ನಿರ್ಮಿಸುವ ಮಹತ್ತರ ಉದ್ದೇಶದಿಂದ ‘ಮನೆ ಮನೆಗೆ ಪೊಲೀಸ್’ ಎಂಬ ವಿನೂತನ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದೆ. ಪೊಲೀಸರು ಮನೆ–ಮನೆಗೆ ಭೇಟಿ ನೀಡುವುದರಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಜನರಲ್ಲಿ ಸುರಕ್ಷತಾ ಮನೋಭಾವ ಮೂಡಲಿದೆ. ಈ ಕಾರ್ಯಕ್ರಮ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಪಿಎಸ್ಐ ಗೌತಮ್ ಗುತ್ತೇದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಮನೆ ಮನೆಗೆ ಪೊಲೀಸ್ ಈ ವಿನೂತನ ಕಾರ್ಯಕ್ರಮದಿಂದ ಪೊಲೀಸ್ ಮತ್ತು ಜನರ ನಡುವಿನ ಸಂಬಂಧ ಇನ್ನಷ್ಟು ಹತ್ತಿರ ಆಗಲಿದೆ ಈ ನಿಟ್ಟಿನಲ್ಲಿ ಕಾನೂನು ವ್ಯವಸ್ಥೆ ಕಾಪಾಡಲು ಅಪರಾಧ ತಡೆಗಟ್ಟಲು ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಗ್ರಾಮದ ಮುಖಂಡರಾದ ಶಿವಯ್ಯ ಗುತ್ತೇದಾರ, ನಿಂಗಣ್ಣಗೌಡ ಮಾಲಿ ಪಾಟೀಲ, ದಶರಥ್ ಸೀತಾಳೆ, ಭೀಮರಾವ್ ನಾಟೀಕಾರ, ಸಿದ್ರಾಮ ರೂಪನೂರ, ಶರಣಪ್ಪ ಬೆಲ್ಲದ್, ನಾಗಪ್ಪ ಪಡಶೆಟ್ಟಿ, ಶಂಕರ ಮರಾಠ, ಅಂಬಣ್ಣ ದಂಡೋತಿ, ಸಾಬಣ್ಣ ಕೀರಣಗಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು. ಶರಣಗೌಡ ಮಾಲಿ ಪಾಟೀಲ ನಿರೂಪಿಸಿದರು.

