Oplus_0

ರಾಷ್ಟ್ರೀಯ ಹೆದ್ದಾರಿ-ಮಾಲಗತ್ತಿ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ತಹಸೀಲ್ದಾರ್ ಗೆ ಮನವಿ

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ತಾಲೂಕಿನ ಮಾಲಗತ್ತಿ ಗ್ರಾಮದ ಹನುಮಾನ ಮಂದಿರದಿಂದ ಎನ್ಎಚ್-150 ಮುಖ್ಯ ರಸ್ತೆವರೆಗೆ ಹಾಗೂ ಶ್ರೀ ಹಿರೋಡೇಶ್ವರ ದೇವಸ್ಥಾನದ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಷ್ಟ್ರೀಯ ಹೆದ್ದಾರಿ ಎನ್ಎಚ್-150 ರಿಂದ ಮಾಲಗತ್ತಿ ಗ್ರಾಮಕ್ಕೆ ಹೋಗುವ ಡಾಂಬರ್ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ಇದರಿಂದ ಗ್ರಾಮಸ್ಥರು, ಎತ್ತಿನ ಬಂಡಿ, ದ್ವಿಚಕ್ರ ಸೇರಿದಂತೆ ವಾಹನಗಳು ಸಂಚರಿಸುವುದಕ್ಕೆ ಸಮಸ್ಯೆ ಉಂಟಾಗುತ್ತಿದೆ. ಅದ್ದರಿಂದ ಕೂಡಲೇ ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮದ ಮುಖ್ಯ ದ್ವಾರದವರೆಗೆ ಪೂರ್ಣ ಪ್ರಮಾಣದ ರಸ್ತೆ ನಿರ್ಮಾಣ ಮಾಡಿಸಬೇಕೆಂದು ಒತ್ತಾಯಿಸಿದರು.

ರಾಷ್ಟ್ರೀಯ ಹೆದ್ದಾರಿಯಿಂದ (ಎನ್ಎಚ್-150) ಉತ್ತರ ಕರ್ನಾಟಕದ ಕುಕ್ಕೆ ಎಂದೇ ಪ್ರಸಿದ್ದವಾಗಿರುವ ಶ್ರೀ ಹಿರೋಡೇಶ್ವರ ದೇವಸ್ಥಾನಕ್ಕೆ ಹೋಗುವ 2.5 ಕಿ.ಮೀ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು, ಸದರಿ ರಸ್ತೆಯಲ್ಲಿ ರಾಜ್ಯ, ಹೊರ ರಾಜ್ಯದಿಂದ ಸಾಕಷ್ಟು ಜನ ಭಕ್ತರು ದೇವಸ್ಥಾನಕ್ಕೆ ದರ್ಶನಕ್ಕೆ, ನಾಗದೋಷ ಪರಿಹಾರಕ್ಕೆ ಆಗಮಿಸುತ್ತಾರೆ. ಈ ರಸ್ತೆಯೂ ಸಹ ಸಂಪೂರ್ಣ ಕೆಟ್ಟು ಹೋಗಿದ್ದು, ರಸ್ತೆಯೂದ್ದಕ್ಕೂ ಸಾಕಷ್ಟು ತೆಗ್ಗುಗಳು ಬಿದ್ದಿವೆ. ದೇವಸ್ಥಾನಕ್ಕೆ ಹಗಲು, ರಾತ್ರಿ ಭಕ್ತರು ಬರುವುದರಿಂದ ಇಂತಹ ರಸ್ತೆಯಲ್ಲಿ ಓಡಾಡುವುದು ಕಠಿಣ, ಅಷ್ಟೇ ಅಪಾಯಕರವಾಗಿದೆ ಎಂದು ಹೇಳಿದರು.

ಈ ರಸ್ತೆ ಶ್ರೀ ಹಿರೋಡೇಶ್ವರ ದೇವಸ್ಥಾನ, ಯರಗಲ್ ಗ್ರಾಮದ ಮೂಲಕ ಚಿತ್ತಾಪುರಕ್ಕೆ ಹೋಗುವುದರಿಂದ ಗ್ರಾಮಸ್ಥರಿಗೂ ಈ ರಸ್ತೆ ಅನುಕೂಲವಾಗಿದೆ. ದೇವಸ್ಥಾನಕ್ಕೆ ಪ್ರತಿದಿನ ಚಿತ್ತಾಪುರ ಡಿಪೋದಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಪ್ರಾರಂಭವಾಗಿದ್ದು, ಈ ಬಸ್ ಓಡಾಡಲು ಸಮರ್ಪಕ ರಸ್ತೆ ಇಲ್ಲದೆ ಇರುವುದರಿಂದ ಕೂಡಲೇ ಭಕ್ತರ ಅನುಕೂಲಕ್ಕಾಗಿ ಪರಿಪೂರ್ಣ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿದರು.

ಈ ರಸ್ತೆಗಳ ನಿರ್ಮಾಣಕ್ಕೆ ಸರಕಾರ ನಿರ್ಲಕ್ಷ್ಯ ವಹಿಸಿದ್ದಲ್ಲಿ, ಗ್ರಾಮಸ್ಥರು, ಭಕ್ತರೊಂದಿಗೆ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 150 ರಲ್ಲಿ ಅನಿರ್ದಿಷ್ಟ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಮೇಶ್ ಭಟ್, ಮಲ್ಲಿಕಾರ್ಜುನ ಇಟಗಿ, ಈಶ್ವರ ಮುಗುಳನಾಗಾಂವ, ನಿಂಗಪ್ಪ ಮುದಕಲ್, ರವಿ ಯರಗೋಳ, ಶಿವುಕುಮಾರ ಕಟ್ಟಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!