ರಟಕಲ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ | ಮಕ್ಕಳ ಪ್ರತಿಭೆ ಅನಾವಣರಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ: ರೇವಣಸಿದ್ಧ ಶಿವಾಚಾರ್ಯರು
ನಾಗಾವಿ ಎಕ್ಸಪ್ರೆಸ್
ಕಾಳಗಿ: ಮಕ್ಕಳಲ್ಲಿ ಹುದುಗಿದ ಸುಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ರಟಕಲ್ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು ಹೇಳಿದರು.
ತಾಲೂಕಿನ ರಟಕಲ್ ಗ್ರಾಮದ ರೇವಣಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ರಟಕಲ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪ್ರತಿ ಮಗುವಿನಲ್ಲಿಯೂ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ. ಮಗುವಿಗೆ ಉತ್ತಮ ಪ್ರೋತ್ಸಾಹ, ಅವಕಾಶ ನೀಡಿದರೆ ಮಗುವಿನಲ್ಲಿ ಅಡಕವಾದ ಸೂಕ್ತ ಪ್ರತಿಭೆ ಹೊರಬರುತ್ತದೆ. ಈ ದಿಶೆಯಲ್ಲಿ ಪ್ರತಿಭಾ ಕಾರಂಜಿ, ಕಲೋತ್ಸವ ಪ್ರತಿಭೆಯ ವೇದಿಕೆಯಾಗಿದೆ ಎಂದು ಹೇಳಿದರು.
ಮಕ್ಕಳು ಸಹ ಶಿಕ್ಷಕರ ಮಾರ್ಗದರ್ಶನದಲ್ಲಿ ಇಂಥ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಬದುಕು ಉಜ್ವಲಗೊಳಿಸಿಕೊಳ್ಳುವ ಮೂಲಕ ರಾಷ್ಟ್ರದ ಉತ್ತಮ ಭವಿಷ್ಯದ ನಿರ್ಮಾತೃವಾಗಬೇಕೆಂದರು.
ಸಿಆರ್’ಪಿ ದಯಾನಂದ ಹುಲಸಗೂಡ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಪ್ರತಿಭಾವಂತರಾಗಿ ಹೊರಬಂದ ಮಕ್ಕಳಲ್ಲಿ ಅನೇಕರು ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಸಾಧಕರಾಗಿ ರಾಜ್ಯ-ರಾಷ್ಟ್ರದ ಹೆಮ್ಮೆಯ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ಆ ದಿಸೆಯಲ್ಲಿ ಪ್ರತಿಭಾ ಕಾರಂಜಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು.
ರಟಕಲ್ ವಲಯ ವ್ಯಾಪ್ತಿಯ ವಿವಿಧ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಹೀಗೆ 18 ಶಾಲೆಗಳ ವಿದ್ಯಾರ್ಥಿಗಳು ಭರತನಾಟ್ಯ, ಸಂಗೀತ, ನೃತ್ಯ, ಗಝಲ್, ಸಾಮೂಹಿಕ ನೃತ್ಯ, ಜನಪದ ನೃತ್ಯ, ಕೋಲಾಟ, ರಂಗೋಲಿ ಸ್ಪರ್ಧೆ, ಚಿತ್ರಕಲೆ, ರಸಪ್ರಶ್ನೆ, ನಾಟಕ, ಅಭಿನಯ ಗೀತೆ, ಛದ್ಮವೇಷ, ಕಂಠಪಾಠ, ಲಘು ಸಂಗೀತ, ಭಕ್ತಿಗೀತೆ, ಆಶುಭಾಷಣ ಮುಂತಾದ ಸ್ಪರ್ಧೆಗಳಲ್ಲಿ ಪ್ರತಿಭೆ ಪ್ರದರ್ಶಿಸಿ ಪ್ರಶಸ್ತಿ ಪಡೆದುಕೊಂಡರು.
ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅನೀಲಕುಮಾರ ಗುತ್ತೇದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ಪಂಚಾಳ, ಕಾರ್ಯದರ್ಶಿ ಸಂತೋಷ ಕಲ್ಮೂಡಕರ್, ಜಿಪಿಟಿ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ದೇವಿಂದ್ರ ಓಕಳಿ ಮಾತನಾಡಿದರು.
ಶಿಕ್ಷಕರ ಸಂಘದ ಉಪಾಧ್ಯಕ್ಷ ಗಂಗಾಧರ ಸಾವಳಗಿ, ಜಗನ್ನಾಥ ಬಂಡಿ, ನಾಗಯ್ಯ ಸಾಲಿಮಠ, ಪ್ರಕಾಶ ರೋಳೆ, ರಟಕಲ್ ರೇವಣಸಿದ್ದೇಶ್ವರ ಶಾಲೆಯ ಮುಖ್ಯಗುರು ಲಕ್ಷ್ಮಣ ದೇಸಾಯಿ, ಹುಲಸಗೂಡ ಸರ್ಕಾರಿ ಶಾಲೆ ಮುಖ್ಯಗುರು ಪಿತಾಂಬರ ಮಡಿವಾಳ, ಶಿಕ್ಷಕರಾದ ಪ್ರಭಾಕರ ಮರಮಂಚಿ, ಧರ್ಮಣ್ಣ ನಾವದಗಿ, ಶಿವಕುಮಾರ್ ಹಜೇಪ, ಕಾವೇರಿ ಚಿಕ್ಕನಾಗಾಂವ್, ಗೀತಾಂಜಲಿ ವಾಲಿಕಾರ, ಶಿವಾಜಿ ಜಾಧವ್ ಸೇರಿದಂತೆ ಅನೇಕರು ಇದ್ದರು.

