ಸೂಗೂರ ಎನ್ ಭೋಜಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ | ವೈಚಾರಿಕತೆ ಹಾಗೂ ವೈಜ್ಞಾನಿಕ ವಿಚಾರಗಳಿಂದ ಜಾತಿ ಹೋಗಲಾಡಿಸಲು ಸಾಧ್ಯ: ಸಿಎಂ ಸಿದ್ದರಾಮಯ್ಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವೈಚಾರಿಕತೆ ಹಾಗೂ ವೈಜ್ಞಾನಿಕ ವಿಚಾರಗಳಿಂದ ಜಾತಿ ಹೋಗಲಾಡಿಸಲು ಸಾಧ್ಯ, ಈ ನಿಟ್ಟಿನಲ್ಲಿ ಭೋಜಲಿಂಗೇಶ್ವರರ ಆಶಯದಂತೆ ಎಲ್ಲರೂ ಭಾವೈಕ್ಯತೆ ಹೊಂದಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಸೂಗೂರ ಎನ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಭೋಜಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ, ನೂತನ ಬೆಳ್ಳಿ ರಥೋತ್ಸವ ಚಾಲನೆ ಹಾಗೂ ಕಲ್ಯಾಣ ಮಂಟಪ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಭೋಜಲಿಂಗೇಶ್ವರರು ಸತ್ಯದ ದಾರಿ ತೋರಿಸಿಕೊಟ್ಟಿದ್ದಾರೆ. ಸಮಾನತೆ ಹಾಗೂ ಭಾವೈಕ್ಯತೆ ನಿರ್ಮಿಸಿದ್ದಾರೆ. ಸಮಾಜದಲ್ಲಿ ಅನೇಕ ಜಾತಿ ಧರ್ಮಗಳಿವೆ, ಅನೇಕ ಭಾಷೆ ಸಂಸ್ಕೃತಿಗಳಿವೆ. ವೈವಿದ್ಯತೆ ಇರುವ ಸಮಾಜದಲ್ಲಿ ಏಕತೆ ಪ್ರದರ್ಶನ ಮಾಡುವುದು ಅತ್ಯವಶ್ಯಕ. ಯಾವುದೇ ಧರ್ಮ ದ್ವೇಷ ಮಾಡಲು ಹೇಳುವುದಿಲ್ಲ ಎಲ್ಲರನ್ನೂ ಪ್ರೀತಿಸಿದಾಗಲೇ ಮಾನವ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ದ್ವೇ಼ಷ ಬಿತ್ತುವಂತ ಜನರು ಇದ್ದಾರೆ. ಧರ್ಮದ ಹೆಸರಲ್ಲಿ ಜಾತಿಯನ್ನು ಒಡೆಯಬೇಕು. ಒಂದು ಧರ್ಮದ ಜನರನ್ನು ಮತ್ತೊಂದು ಧರ್ಮದ ವಿರುದ್ದ ಎತ್ತಿಕಟ್ಟುವ ಮೂಲಕ ಪಟ್ಟಭದ್ರರು ತಮ್ಮ ಲಾಭ ಮಾಡಿಕೊಳ್ಳುತ್ತಾರೆ. ನೀವು ಅಂತಹ ಪಟ್ಟಭದ್ರರ ಮಾತು ಕೇಳಬಾರದು ಎಂದು ನಿಮಗೆ ಹೇಳಲು ಇಚ್ಚಿಸುತ್ತೇನೆ. ನಾವೆಲ್ಲ ಭಾವೈಕ್ಯರರಾಗಿರಬೇಕು, ಒಗ್ಗಟ್ಟಾಗಿರಬೇಕು ಎಂದು ಭೋಜಲಿಂಗೇಶ್ವರರು ಹೇಳಿದ್ದಾರೆ ಎಂದು ಪುನರುಚ್ಚರಿಸಿದರು.
ಸ್ವಚ್ಛ ಮನಸಿನಿಂದ ದೇವಸ್ಥಾನಕ್ಕೆ ಹೋಗಿ ನಮಗಷ್ಟೇ ಅಲ್ಲದೇ ಎಲ್ಲರಿಗೂ ಒಳ್ಳೆಯದು ಮಾಡು ಎಂದು ಪ್ರಾರ್ಥಿಸಿದಾಗ ಮಾತ್ರ ಫಲ ಸಿಗುತ್ತದೆ. ಬಸವಣ್ಣ, ಸೂಫಿ, ಸಂತರು ಕೂಡಾ ಇದನ್ನೇ ಪ್ರತಿಪಾದಿಸಿದರು. ಬಸವಣ್ಣ ಕಾಯಕ ಹಾಗೂ ದಾಸೋಹ ಎರಡನ್ನು ಒತ್ತಿ ಹೇಳಿದ್ದಾರೆ. ಎಲ್ಲರೂ ಕಷ್ಟಪಟ್ಟು ದುಡಿಯಬೇಕು. ಹಾಗೆ ಬಂದದನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳಬೇಕು. ಕಾಯಕ ಹಾಗೂ ದಾಸೋಹಗಳನ್ನು ಎಲ್ಲರೂ ಮಾಡಬೇಕು. ಕೆಲವರೇ ಮಾಡಿದರೆ ಅಸಮಾನತೆ ಸಮಾಜ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರಿಗೆ ಸಮಾನತೆ ಹಾಗೂ ಆರ್ಥಿಕಶಕ್ತಿ ಬಂದಾಗ ಮಾತ್ರ ಸಮಾನತೆಯಾಗುತ್ತದೆ ಎಂದರು.
ಭೋಜಲಿಂಗೇಶ್ವರ ದೇವಾಲಯದ ಶಕ್ತಿ ಜನರಿಗೆ ತಿಳಿಸುವ ಕೆಲಸ ನೀವೆಲ್ಲ ಮಾಡಬೇಕು ಎಂದು ಹೇಳಿದ ಸಿಎಂ, ಬಸವಣ್ಣನವರ ಇವನಾರವ ಇವನಾರವ ಎಂದೆನಿಸದಿರಯ್ಯ ಎನ್ನುವ ವಚನ ಹಾಗೂ ಕನಕದಾಸರ ಕುಲಕುಲವೆಂದು ಹೊಡದಾಡದಿರಿ ಎನ್ನುವ ವಾಣಿಯನ್ನು ಸಿಎಂ ಉಚ್ಚರಿಸಿದರು.
ಬಸವಣ್ಣನವರ, ಕನಕದಾಸರ ಶರಣರ, ಸಾಧು ಸಂತರ ಸಮಾನತೆಯ ತತ್ವಗಳು ಇದ್ದರೂ ಕೂಡಾ ಇನ್ನೂ ಜಾತಿ ವ್ಯವಸ್ಥೆ ಹೋಗಿಲ್ಲ. ಇವನಾರವ ಎನ್ನುತ್ತೇವೆ ಹೊರತು ಇವ ನಮ್ಮವ ಎನ್ನುತ್ತಿಲ್ಲ. ಕನಕದಾಸರ ಉಕ್ತಿಯಂತೆ ಕುಲದ ಆಚೆಗೆ ನಾವೆಲ್ಲ ಮನುಷ್ಯರಾಗಿ ಬಾಳಬೇಕು ಎಂದು ಕರೆ ನೀಡಿದ ಸಿಎಂ, ಡಾ ಅಂಬೇಡ್ಕರ್ ಅವರ ಆಶಯದಂತೆ ಎಲ್ಲರೂ ಸಮಾನವಾಗಿ ಬಾಳಬೇಕು. ಈ ಎಲ್ಲ ತತ್ವಗಳು ಜಾರಿಗೆ ಬರಲು ಪ್ರತಿಯೊಬ್ಬರು ಆಚರಣೆ ಮಾಡಬೇಕು. ಜಾತಿ ವ್ಯವಸ್ಥೆಯ ವಿರುದ್ದ ಚಾಲನೆ ಸಿಗಬೇಕೆಂದರೆ ಶಿಕ್ಷಣ ದೊರಕಿದಾಗ ಮಾತ್ರ ಸಮಾನತೆ ಸಿಗುತ್ತದೆ. ದೇವಸ್ಥಾನ ಉದ್ಘಾಟನೆ ನೆರವೇರಿಸಿದ್ದೇನೆ. ಇದು ಸಾರ್ಥಕವಾಗಬೇಕಾದರೆ ನೀವೆಲ್ಲ ಮನುಷ್ಯರಾಗಿ ಬಾಳಬೇಕು ಎಂದರು.
ಜಾತಿ ವ್ಯವಸ್ಥೆ ಸ್ವಲ್ಪ ಕಡಿಮೆಯಾಗಿದೆ. ಇನ್ನೂ ಜಾತಿ ವ್ಯವಸ್ಥೆ ಹೋಗಿಲ್ಲ. ಪ್ರತಿಯೊಬ್ಬರು ವೈಚಾರಿಕತೆ ಹಾಗೂ ವೈಜ್ಞಾನಿಕ ಹಿನ್ನೆಲೆಯ ಇರುವ ವಿದ್ಯೆ ಪಡೆದುಕೊಳ್ಳಬೇಕು. ಸಮಾಜದಲ್ಲಿ ಮೂಢನಂಬಿಕೆಗಳ ದಾಸರಾಗಬೇಡಿ. ಬಸವಣ್ಣನವರು ಆ ಕಾಲದಲ್ಲಿಯೇ ಕರ್ಮ ಸಿದ್ಧಾಂತ ತಿರಸ್ಕಾರ ಮಾಡಿದ್ದರು. ಈಗಲೂ ವಿದ್ಯಾವಂತರಲ್ಲಿ ಕೆಲವರು ಇದನ್ನು ನಂಬುತ್ತಾರೆ. ಈಗ ಯಾವುದೇ ಸೌಲಭ್ಯ ಪಡೆದಿಲ್ಲ ಎಂದರೆ ಹಿಂದಿನ ಜನ್ಮದಲ್ಲಿ ಏನೋ ಮಾಡಿದ್ದೇನೆ ಎಂದು ಕೆಲವರು ಹೇಳುತ್ತಾರೆ. ಕರ್ಮಸಿದ್ದಾಂತವೇ ಶುದ್ಧ ಸುಳ್ಳು. ನೀವೆಲ್ಲ ಅದನ್ನು ನಂಬಬೇಡಿ ಎಂದರು.
ಭೋಜಲಿಂಗೇಶ್ವರರಿಗೆ ಶಾಂತಿ ಸಮಾಧಾನ ಸಿಗಬೇಕಾದರೆ, ನೀವೆಲ್ಲ ವೈಜ್ಞಾನಿಕ ಹಾಗೂ ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಹೇಳಿದ ಸಿಎಂ, ಹಿರಗಪ್ಪ ತಾತನವರ ತಮಗೆ ಕೊಟ್ಟಿರುವ ಅರ್ಜಿಯಲ್ಲಿ ವಸತಿ ನಿಲಯ ನಿರ್ಮಾಣ ಮಾಡಲು ಹಣ ಕೊಡಲು ಹಾಗೂ ಯಾತ್ರಿ ನಿವಾಸ ಮಾಡಲು ಮನವಿ ಮಾಡಿದ್ದಾರೆ. ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಯಾತ್ರಿ ನಿವಾಸಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ. ವಸತಿ ನಿಲಯ ಪ್ರಾರಂಭಕ್ಕೆ ಸರ್ಕಾರ ಸಹಾಯ ಮಾಡುತ್ತದೆ ಎಂದು ಭರವಸೆ ನೀಡಿದರು.
ಭೋಜಲಿಂಗೇಶ್ವರ ಮಠದ ಅಭಿವೃದ್ದಿ, ಶೈಕ್ಷಣಿಕ ಅಭಿವೃದ್ದಿ ಹಾಗೂ ಇತರೆ ಕಾಮಗಾರಿಗಳಿಗೆ ಸಿಎಂ ಘೋಷಿಸಿದ ರೂ 1 ಕೋಟಿಯನ್ನು ಬಿಡುಗಡೆಗೊಳಿಸುವುದರ ಜೊತೆಗೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಜವಾಬ್ದಾರಿ ನನಗೆ ಸೇರಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಜನರ ಹರ್ಷೋದ್ಘಾರದ ನಡುವೆ ಘೋಷಿಸಿದರು.
ವೇದಿಕೆಯ ಮೇಲೆ ಭೋಜಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಹಿರಗಪ್ಪ ತಾತನವರು, ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ ಶರಣಪ್ರಕಾಶ ಪಾಟೀಲ್, ಶಾಸಕರಾದ ಎಂ ವೈ ಪಾಟೀಲ, ಅಲ್ಲಮಪ್ರಭು ಪಾಟೀಲ, ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಎಂ ಎಲ್ ಸಿ ಗಳಾದ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಮಾಲಾ ನಾರಾಯಣರಾವ್, ಮೆಹೆಬೂಬ್ ಸಾಹೇಬ್ ಚಿಸ್ತಿ, ಬಾಬು ಹೊನ್ನಾನಾಯಕ್, ಲಿಂಗಾರೆಡ್ಡಿ ಬಾಸರೆಡ್ಡಿ, ಹನುಮೇಗೌಡ ಬೀರನಕಲ್, ಮಹೇಶ್ ರೆಡ್ಡಿ ಮುದ್ನಾಳ್ ಸೇರಿದಂತೆ ಹಲವರಿದ್ದರು.
