ತಂತ್ರಜ್ಞಾನ ಕ್ಷೇತ್ರದ ಬಲವರ್ಧನೆಗಾಗಿ ಜಾಗತಿಕ ಸಹಕಾರವನ್ನು ಹೆಚ್ಚಿಸುವುದಕ್ಕೆ ಅಮೇರಿಕಾದ ನ್ಯೂಜೆರ್ಸಿ ರಾಜ್ಯ ಇಲಾಖೆಯೊಂದಿಗೆ ಒಪ್ಪಂದ: ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದ ಬಲವರ್ಧನೆಗಾಗಿ ಜಾಗತಿಕ ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆಯು ಅಮೇರಿಕಾದ ನ್ಯೂಜೆರ್ಸಿ ರಾಜ್ಯ ಇಲಾಖೆಯೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ಹಾಗೂ ಐಟಿಬಿಟಿ ಮತ್ತು ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಒಪ್ಪಂದದ ಮಹತ್ವ ಹೀಗಿದೆ:
ಟ್ವಿನ್ ಸಿಟಿ ಸಹಯೋಗ : ಬೆಂಗಳೂರು ಮತ್ತು ನ್ಯೂ ಬ್ರನ್ಸ್‌ವಿಕ್ ನಡುವೆ ಗುರುತಿಸಲ್ಪಡುವ ವಲಯಗಳಲ್ಲಿ ವಿನಿಮಯವನ್ನು ಉತ್ತೇಜಿಸುವುದು.
ಸ್ಟಾರ್ಟಪ್ ಇಕೋಸಿಸ್ಟಮ್ ಎಂಗೇಜ್‌ಮೆಂಟ್ : ಎರಡೂ ಪ್ರದೇಶಗಳ ಆರಂಭಿಕ ತಂತ್ರಾಂಶದ ವ್ಯವಸ್ಥೆಗಳ ನಡುವೆ ಅವಕಾಶಗಳನ್ನು ಹೆಚ್ಚಿಸಲು ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು.
ತಾಂತ್ರಿಕ ಸಹಯೋಗ : ಜೀವವಿಜ್ಞಾನ, ಆಳವಾದ ತಂತ್ರಜ್ಞಾನಗಳು (ಸೈಬರ್ ಸೆಕ್ಯುರಿಟಿ, ಎಐ) ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ವಲಯಗಳಲ್ಲಿ ಸಹಕಾರವನ್ನು ಮುಂದುವರಿಸುವುದು.
ನಿರ್ದಿಷ್ಟ ಕ್ಷೇತ್ರಗಳ ಗಮನ : ಜೀವವಿಜ್ಞಾನ, ಆಳವಾದ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಹಯೋಗದ ಪ್ರಮುಖ ವಲಯಗಳಾಗಿವೆ.
ಈ ಒಪ್ಪಂದದಿಂದ ಜಾಗತಿಕ ಮಟ್ಟದ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನವನ್ನು ಮುಂಚೂಣಿಗೆ ಕರೆದೊಯ್ಯಲು ನೆರವಾಗುತ್ತದೆ. ವಿಶೇಷವಾಗಿ ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳು, AI ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಪ್ರಮುಖ ಕ್ಷೇತ್ರಗಳಲ್ಲಿ ಈ ಸಹಯೋಗ ಮಹತ್ವದ ಪಾತ್ರ ವಹಿಸಲಿದೆ.
ಈ ಸಹಯೋಗವು ಕರ್ನಾಟಕದ ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ (ಜಿಐಎ)ನೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಇದು ಜ್ಞಾನ – ಹಂಚಿಕೆಯನ್ನು ಉತ್ತೇಜಿಸಲು ಮತ್ತು ನಾವೀನ್ಯತೆ ಹೆಚ್ಚಿಸಲು ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ಆಕರ್ಷಿಸಲು ಅನುವು ಮಾಡುತ್ತದೆ ಎಂದು ತಿಳಿಸಿದ್ದಾರೆ.