ಪ್ರತಿ ಎಕರೆಗೆ 50 ಲಕ್ಷ, ನೌಕರಿ ನೀಡಲು ಆಗ್ರಹ | ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿ ದಲ್ಲಾಳಿಗಳ ಮೂಲಕ ಜಮೀನು ಖರೀದಿ ಮಾಡದೇ ರೈತರಿಂದಲೇ ನೇರವಾಗಿ ಖರೀದಿ ಮಾಡಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿಯವರು ದಲ್ಲಾಳಿಗಳ ಮೂಲಕ ಜಮೀನು ಖರೀದಿ ಮಾಡುವುದನ್ನು ನಿಲ್ಲಿಸಿ ನೇರವಾಗಿ ರೈತರಿಂದಲೇ ಜಮೀನು ಖರೀದಿ ಮಾಡಬೇಕು ಎಂದು ರೈತ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಶೈಲ್ ಪಾಟೀಲ ಹಾಗೂ ಸುರೇಶ್ ಅಚೇಲಿ ಅವರು ಆಗ್ರಹಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ದಿಗ್ಗಾಂವ ಗ್ರಾಮದ ಹತ್ತಿರ ಗಣಿಗಾರಿಕೆ ಯೋಜನೆಗಾಗಿ ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿಯವರು ದಿಗ್ಗಾಂವ, ಹಂಗನಳ್ಳಿ, ಉಡುಗಿ ಮತ್ತು ಶೆಟ್ಟಿ ಹುಡಾ ಗ್ರಾಮಗಳ ವ್ಯಾಪ್ತಿಯ 2 ಸಾವಿರ ಎಕರೆ ಜಮೀನನ್ನು ನೇರವಾಗಿ ರೈತರಿಂದ ಖರೀದಿ ಪ್ರಕ್ರಿಯೆ ಮಾಡದೇ ದಲ್ಲಾಳಿಗಳ ಮೂಲಕ ಜಮೀನು ಖರೀದಿ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ 2024 ಜುಲೈ ತಿಂಗಳಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕ ಸಭೆ ನಡೆಸಿ ರೈತರ ಅಭಿಪ್ರಾಯಗಳನ್ನು ಪಡೆದುಕೊಂಡು ಹೋಗಿದ್ದರು. ಮತ್ತೊಮ್ಮೆ ಸಭೆ ಮಾಡಿ ರೈತರ ಜಮೀನಿನ ಬೆಲೆ ನಿಗದಿ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಈಗ ಯಾರ ಗಮನಕ್ಕೆ ಇಲ್ಲದೇ ಮಧ್ಯವರ್ತಿಗಳ ಮೂಲಕ ಕಂಪೆನಿಯವರು ರೈತರ ಜಮೀನು ಖರೀದಿ ಮಾಡುತ್ತಿದ್ದಾರೆ. ಇಲ್ಲಿ ಬಡ ರೈತರನ್ನು ಹಾಗೂ ಸಣ್ಣ ಅತಿ ಸಣ್ಣ ರೈತರನ್ನು ಗುರಿಯಾಗಿಸಿಕೊಂಡು ಅಂತಹವರಿಗೆ ಹಣದ ಆಸೆ ತೋರಿಸಿ ಜಮೀನು ಖರೀದಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರತಿ ಎಕರೆಗೆ 50 ಲಕ್ಷ ಬೆಲೆ ನೀಡಬೇಕು ಎಂಬ ನಮ್ಮ ಬೇಡಿಕೆ ಇದೆ ಆದರೆ ಕಂಪೆನಿಯವರು ದಲ್ಲಾಳಿಗಳ ಸಹಕಾರದಿಂದ ಬರೀ 21 ಲಕ್ಷ ಕ್ಕೆ ಜಮೀನು ಖರೀದಿ ಮಾಡುವ ಮೂಲಕ ರೈತರಿಗೆ ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಇಲ್ಲಿವರೆಗೆ ಬೆಲೆ ನಿಗದಿ ಕುರಿತು ಸಭೆ ಕರೆದಿಲ್ಲ ಆದರೂ ಜಮೀನು ಖರೀದಿ ಪ್ರಕ್ರಿಯೆ ನಡೆದಿದೆ. ಕೆಲವು ರೈತರು ತಮ್ಮ ವೈಯಕ್ತಿಕ ಸಾಲದಿಂದ ನೊಂದು ಕಡಿಮೆ ಬೆಲೆಗೆ ಜಮೀನನ್ನು ಕಂಪೆನಿಯವರಿಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಕೆಳವರ್ಗದ ರೈತರು ದಲ್ಲಾಳಿಗಳಿಂದ ಮೋಸ ಹೋಗುತ್ತಿದ್ದಾರೆ ಎಂದರು. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕಡೆ ಗಮನ ಹರಿಸಿ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪ್ರತಿ ಎಕರೆಗೆ 50 ಲಕ್ಷ ಬೆಲೆ ನೀಡಬೇಕು, ಪ್ರತಿ ಸರ್ವೆ ನಂ.ಗೆ ನೌಕರಿ ಕೊಡಬೇಕು, ಗ್ರಾಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಸಿಎಸ್ಆರ್ ಅನುದಾನ ನೀಡಬೇಕು ಎಂದು ಆಗ್ರಹಿಸಿದರು. ರೈತರ ಜಮೀನುಗಳಿಗೆ ಯೋಗ್ಯ ಬೆಲೆ ಹಾಗೂ ನೌಕರಿ ಸಿಗಬೇಕು ಇಲ್ಲದಿದ್ದರೆ ರೈತರೊಂದಿಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತರಾದ ದೇವಿಂದ್ರಪ್ಪ ತಳವಾರ, ಶರಣಪ್ಪ ಬುಕ್ಕಾ, ಅಶೋಕ ಗುತ್ತೇದಾರ, ನಿಂಬಣ್ಣಗೌಡ ಮಾಲಿ ಪಾಟೀಲ ಇದ್ದರು.

