ವರದಕ್ಷಿಣೆ ವಿರುದ್ದ ತಾಂಡಾಗಳಲ್ಲಿ ಜಾಗೃತಿ, ಯುವಕರ ಕಾರ್ಯಕ್ಕೆ ಗೃಹ ಸಚಿವರ ಮೆಚ್ಚುಗೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ವರದಕ್ಷಿಣೆ ಪಿಡುಗಿನ ವಿರುದ್ದ ಲಂಬಾಣಿ ಸಮುದಾಯ ಕೈಗೊಂಡ ನಿರ್ಧಾರ ಅತ್ಯಂತ ಪ್ರಶಂಸಾರ್ಹ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘಿಸಿದ್ದಾರೆ.
ಜಿಲ್ಲೆಯ ಆಳಂದ ತಾಲೂಕಿನ ವಿವಿಧ ತಾಂಡಾಗಳಲ್ಲಿ ವರದಕ್ಷಿಣೆ ವಿರೋಧಿ ಅಭಿಯಾನ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಬಂಜಾರಾ ಕ್ರಾಂತಿ ದಳ ಹಾಗೂ ಸಂತ ಸೇವಾಲಾಲ್ ಜಯಂತಿ ಸಮಿತಿ ತಾಲೂಕಿನ 52 ತಾಂಡಾಗಳಲ್ಲಿ ಕಾರ್ಯಕ್ರಮ ಏರ್ಪಡಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಗೃಹ ಸಚಿವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಕೊಂಡಾಡಿದ್ದಾರೆ.
ಬಂಜಾರಾ ಸಮುದಾಯದಲ್ಲಿ ಮೊದಲು ಸರಳ ವಿವಾಹಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಕಾಲ ಬದಲಾದಂತೆ ಸಮುದಾಯದ ಜನರು ಕೂಡಾ ವರದಕ್ಷಿಣೆ ಕೊಟ್ಟು ಕೊಳ್ಳುವಿಕೆಗೆ ಒಗ್ಗಿಕೊಳ್ಳಬೇಕಾಯಿತು. ಇದರಿಂದಾಗಿ ಸಮುದಾಯದಲ್ಲಿ ಆರ್ಥಿಕವಾಗಿ ದುರ್ಬಲವಾದವರಿಗೆ ಹೊರೆಯಾಗತೊಡಗಿತು.
ಈ ಅನಿಷ್ಟ ಪದ್ದತಿಯಿಂದ ಸಮುದಾಯದ ಜನರ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗುತ್ತಿರುವುದನ್ನು ಮನಗಂಡ ಬಂಜಾರಾ ಕ್ರಾಂತಿದಳ ಹಾಗೂ ಸೇವಾಲಾಲ್ ಜಯಂತಿ ಸಮಿತಿಯ ಯುವಕರು ತಾಂಡಾಗಳಲ್ಲಿ ವರದಕ್ಷಿಣೆ ವಿರುದ್ದ ಜನಜಾಗೃತ ಮೂಡಿಸುತ್ತಿದ್ದಾರೆ. ಇನ್ನು ಮುಂದೆ ಬಂಜಾರಾ ಸಮುದಾಯದ ಯಾರೂ ಕೂಡಾ ವರದಕ್ಷಿಣೆ ಕೊಡುವುದು ಹಾಗೂ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ತೊರೆಯುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಇಂತಹ ಪ್ರಮುಖ ಸಾಮಾಜಿಕ ಬದಲಾವಣೆಗೆ ಬಂಜಾರ ಸಮುದಾಯ ಮುಂದಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಖರ್ಗೆ ಹೇಳಿದ್ದಾರೆ.
ವರದಕ್ಷಿಣೆಯಂತ ಸಾಮಾಜಿಕ ಪಿಡುಗಿನ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಪ್ರತಿಯೊಬ್ಬರು ಕೂಡಾ ಸಮಾಜಕ್ಕೆ ಮಾದರಿಯಾಗುವಂತ ಕೆಲಸ ಮಾಡುತ್ತಿದ್ದಾರೆ ಎಂದ ಗೃಹ ಸಚಿವರು, ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಹಾಗೂ ತಾಂಡಾಗಳಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರು ಇಂತಹ ಪ್ರಮುಖ ನಿರ್ಧಾರ ಕೈಗೊಂಡು ವರದಕ್ಷಿಣೆಯಂತ ಸಾಮಾಜಿಕ ಪಿಡುಗಿನ ವಿರುದ್ದ ಜನ ಜಾಗೃತಿ ಮೂಡಿಸುವ ಮೂಲಕ ಬಹುಮುಖ್ಯ ಸಮಾಜಿಕ ಬದಲಾವಣೆಯ ಈ ಪ್ರಯೋಗದಲ್ಲಿ ಭಾಗಿಯಾಗುವಂತೆ ಸಚಿವರು ಕರೆ ನೀಡಿದ್ದಾರೆ.

