Oplus_0

ವಾಡಿ ಎಂಪಿಎಸ್ ಶಾಲೆ ಅಭಿವೃದ್ಧಿಗಾಗಿ ಕನ್ನಡಪರ ಸಂಘಟನೆಗಳ ಮುಖಂಡರು ತಹಸೀಲ್ದಾರ್ ಗೆ ಮನವಿ

ನಾಗಾವಿ ಎಕ್ಸಪ್ರೆಸ್ 

ವಾಡಿ: ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡು ಬಿದ್ದಿದೆ. ಮಕ್ಕಳ ಶಿಕ್ಷಣ ಹಿತದೃಷ್ಟಿಯಿಂದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಈ ಕುರಿತು ಸೋಮವಾರ ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು, ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಆಗ್ರಹಿಸಿದ್ದಾರೆ.

ಕನ್ನಡ, ಮರಾಠಿ ಹಾಗೂ ಉರ್ದು ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳು ಒಂದೇ ಕಟ್ಟಡದಲ್ಲಿ ನಡೆಯುತ್ತಿವೆ. ಕಳೆದ ಐವತ್ತು ವರ್ಷಗಳ ಹಿಂದೆ ನಿರ್ಮಿಸಲಾದ ಈ ಕಟ್ಟಡ ಇಂದು ಕುಸಿಯುವ ಹಂತಕ್ಕೆ ತಲುಪಿದೆ. ಇಲ್ಲಿನ ಎಲ್ಲಾ ಹದಿಮೂರು ತರಗತಿ ಕೋಣೆಗಳ ಸ್ಥಿತಿ ದುಸ್ಥಿತಿಗೆ ತಲುಪಿದೆ. ಶಿಕ್ಷಣ ಇಲಾಖೆ ಶಾಲೆಯ ಅಭಿವೃದ್ಧಿಗೆ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಎಂಪಿಎಚ್ ಎಸ್ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ತರಗತಿ ಕೋಣೆಗಳು ಬಳಕೆಗೆ ಬಾರದ ಕಾರಣ ಎಲ್ಲಾ ಮಕ್ಕಳನ್ನು ಪಕ್ಕದ ಎರಡು ಹೆಚ್ಚುವರಿ ಕೋಣೆಗಳಿಗೆ ಸ್ಥಳಾಂತರ ಮಾಡಲಾಗಿದೆ. ಎರಡು ಸಣ್ಣ ಕೋಣೆಗಳಲ್ಲಿ ಕನ್ನಡ, ಉರ್ದು, ಮರಾಠಿ ಮಾಧ್ಯಮ ಶಾಲೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಬಡ ಮಕ್ಕಳ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಶಾಲೆಯ ಕಟ್ಟಡ ಪುನರ್ ನಿರ್ಮಾಣಕ್ಕೆ ಮುಂದಾಗಬೇಕು. ನೆಲ ಮಹಡಿಯಲ್ಲಿ ಹದಿಮೂರು ಕೋಣೆ ಮತ್ತು ಮೊದಲ ಮಹಡಿಯಲ್ಲಿ ಹದಿಮೂರು ಕೋಣೆಗಳ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರವನ್ನು ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಮನವಿ ಮಾಡಿದ್ದಾರೆ.

ಕಸಾಪ ಅಧ್ಯಕ್ಷ ಸಿದ್ದಯ್ಯ ಶಾಸ್ತ್ರಿ ನಂದೂರುಮಠ, ಗೌರವ ಸಲಹೆಗಾರ ಮಡಿವಾಳಪ್ಪ ಹೇರೂರ, ಕಾರ್ಯದರ್ಶಿ ಚಂದ್ರು ಕರಣಿಕ, ಬಸವರಾಜ ಕೇಶ್ವಾರ, ಖೇಮಲಿಂಗ ಬೆಳಮಗಿ, ದಯಾನಂದ ಖಜೂರಿ, ರಾಯಪ್ಪ ಕಮರವಾಡಿ, ನಮ್ಮ ಕರ್ನಾಟಕ ಸೇನೆಯ ತಾಲೂಕು ಅಧ್ಯಕ್ಷ ಸುನೀಲ ಗುತ್ತೇದಾರ, ವಾಡಿ ಘಟಕ ಅಧ್ಯಕ್ಷ ಸಿದ್ದು ಪೂಜಾರಿ, ಅಂಬರೀಶ ಮಾಳಗಿ, ಕರವೇ ವಾಡಿ ಅಧ್ಯಕ್ಷ ಶಿವುಕುಮಾರ ಗುತ್ತೇದಾರ, ಗಣೇಶ ರಾಠೋಡ, ಶೇಖ ಇಮ್ರಾನ್, ಸುನೀಲ ನೀರಡಗಿ, ಸಾಬಯ್ಯ ಗುತ್ತೇದಾರ, ಅರ್ಜುನ ಕಟ್ಟಿಮನಿ ನಿಯೋಗದಲ್ಲಿ ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!