ಚಿತ್ತಾಪುರ ತಹಸೀಲ್ದಾರ್ ಗೆ ಮನವಿ | ವಾಡಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಕರವೇ ಆಗ್ರಹ
ನಾಗಾವಿ ಎಕ್ಸಪ್ರೆಸ್
ವಾಡಿ: ಸಂಪೂರ್ಣ ಶಿಥಿಲಗೊಂಡು ಬಳಕೆಗೆ ಬಾರದಂತಾಗಿರುವ ವಾಡಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವಾಡಿ ವಲಯ ಘಟಕದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಾಡಿ ಅಧ್ಯಕ್ಷ ಶಿವುಕುಮಾರ ಗುತ್ತೇದಾರ ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿರುವ ಐದು ದಶಕಗಳ ಹಳೆಯದಾಗಿರುವ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಭವ್ಯ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಗೇ ತಲುಪಿದ್ದು, ಇಡೀ ಕಟ್ಟಡ ಇಂದೋ ನಾಳೆಯೋ ಧರೆಗುರುಳುವ ಸ್ಥಿತಿಯಲ್ಲಿದೆ. ಮಕ್ಕಳು ಹಾಗೂ ಶಿಕ್ಷಕರು ಜೀವ ಭಯದಲ್ಲಿ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪೋಷಕರು ಇಂತಹ ಅಪಾಯಕಾರಿ ಶಾಲಾ ಕಟ್ಟಡದಲ್ಲಿ ತಮ್ಮ ಮಕ್ಕಳನ್ನು ಅಕ್ಷರ ಅಭ್ಯಾಸ ಮಾಡಲು ವೀರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಇಲ್ಲಿ ಬಹುತೇಕ ಕಲ್ಲು ಗಣೆಯಲ್ಲಿ ಕೆಲಸ ಮಾಡುವ ಬಡ ಕೂಲಿ ಕಾರ್ಮಿಕರೇ ಹೆಚ್ಚಿದ್ದಾರೆ. ವಿಶೇಷವಾಗಿ ಬಡ ಕೂಲಿಕಾರ್ಮಿಕರ ಮಕ್ಕಳೇ ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಕಳೆದ ಜುಲೈ ಮತ್ತು ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಶಾಲೆಯ ಎಲ್ಲಾ 13 ಕೋಣೆಗಳ ಮೇಲ್ಟಾವಣಿಯಲ್ಲಿ ಕಾಂಕ್ರೀಟ್ ಕಳಚಿ ಬಿದ್ದಿದೆ. ಇದರಿಂದ ಶಾಲೆಯ ಪೀಠೋಪಕರಣಗಳು ಮುರಿದು ಹಾಳಾಗಿವೆ. ಮಾದ್ಯಮಗಳಲ್ಲಿ ಈ ಕುರಿತು ವರದಿ ಪ್ರಕಟಿಸಿದಾಗ ತಾಲೂಕು ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಶಾಲಾ ಚಟುವಟಿಕೆಗಳಿಗೆ ಈ ಕಟ್ಟಡ ಯೋಗ್ಯವಲ್ಲ ಎಂದು ಹೇಳಿ ತಾತ್ಕಾಲಿಕವಾಗಿ ಮರಾಠಿ ಶಾಲೆಯಲ್ಲಿ ತರಗತಿಯನ್ನು ನಡೆಸಲು ಮಕ್ಕಳನ್ನು ಸ್ಥಳಾಂತರಿಸಿದ್ದಾರೆ.
ಆದ್ದರಿಂದ ವಿಶೇಷ ಅನುದಾನ ಬಿಡುಗಡೆ ಮಾಡುವ ಮೂಲಕ ಈ ಕನ್ನಡ ಮಾಧ್ಯಮ ಶಾಲೆಗೆ ಹೊಸದಾಗಿ ಸುಸಜ್ಜಿತವಾದ ಶಾಲಾ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕು ಸಹ ಕಾರ್ಯದರ್ಶಿ ಗಣೇಶ್ ರಾಠೋಡ ಮಾತನಾಡಿ, ಹಳೆಯ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡುವ ಮೂಲಕ ಸರ್ಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಮರಾಠಿ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಉರ್ದು ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಇದೇ ಶಾಲಾ ಕಟ್ಟಡದ ಮೊದಲ ಮಹಡಿಯಲ್ಲಿ ಸರ್ಕಾರಿ ಕನ್ಯಾ ಪ್ರೌಢ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಸರ್ಕಾರಿ ಐಟಿಐ ಕಾಲೇಜುಗಳಿಗೆ ಕೋಣೆಗಳನ್ನು ಮೀಸಲಿಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆರವೇ ಪದಾಧಿಕಾರಿಗಳಾದ ಇಮ್ರಾನ್ ಸೇಟ್ , ಅನಿಲ್ ನೀರಡಿಗಿ, ಸಾಬಯ್ಯಾ ಗುತ್ತೇದಾರ, ಅರ್ಜುನ್ ಕಟ್ಟಿಮನಿ ಇದ್ದರು.

