ಅನುಮತಿ ಇಲ್ಲದೆ ಶಾಮಿಯಾನ ಹಾಕಿದ್ದಕ್ಕೆ ಬಿಜೆಪಿ ಆಕ್ಷೇಪ | ನಾಗರೆಡ್ಡಿ ಪಾಟೀಲ ಕರದಾಳ ಜನ್ಮದಿನದದ ಅನ್ನಸಂತರ್ಪಣೆ ಶಾಮಿಯಾನ ತೆರವುಗೊಳಿಸಿದ ಪುರಸಭೆ ಅಧಿಕಾರಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೆಪಿಸಿಸಿ ಸದಸ್ಯ ಶಿಕ್ಷಣ ಪ್ರೇಮಿ ನಾಗರೆಡ್ಡಿ ಪಾಟೀಲ ಕರದಾಳ ಅವರ 65 ನೇ ಜನ್ಮದಿನಾಚರಣೆ ಪ್ರಯುಕ್ತ ಅವರ ಅಭಿಮಾನಿ ಬಳಗದವರು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬ್ಯಾನರ್ ಹಾಗೂ ಬಸವೇಶ್ವರ ವೃತ್ತದಲ್ಲಿ ಶಾಮಿಯಾನ ಹಾಕಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಇದಕ್ಕೆ ಬಿಜೆಪಿಯ ಕೆಲ ಮುಖಂಡರು ಆಕ್ಷೇಪಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದರಿಂದ ಸ್ಥಳೀಯ ಪುರಸಭೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಶಾಮಿಯಾನ ತೆರವುಗೊಳಿಸಿದ ಪ್ರಸಂಗ ಸೋಮವಾರ ನಡೆಯಿತು.
ಬೆಳಗ್ಗೆ 9.30 ಕ್ಕೆ ಹಾಕಿದ ಶಾಮಿಯಾನ 12.30 ಕ್ಕೆ ತೆರವುಗೊಳಿಸಿದ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಪಟ್ಟಣದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ವಿಪರ್ಯಾಸವೆಂದರೆ ನಾಗರೆಡ್ಡಿ ಪಾಟೀಲ ಕರದಾಳ ಅವರ ಜನ್ಮದಿನವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಸೇರಿ ಪಕ್ಷಾತೀತವಾಗಿ ಆಯೋಜಿಸಿದ್ದರು. ಹೀಗಿರುವಾಗ ಬಿಜೆಪಿಯ ಕೆಲ ಮುಖಂಡರು ದೂರು ನೀಡಿ ಶಾಮಿಯಾನ ತೆರವುಗೊಳಿಸಿದ್ದು ಬಿಸಿ ಬಿಸಿ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ಬಸವೇಶ್ವರ ವೃತ್ತದಲ್ಲಿ ಪುರಸಭೆ ಅನುಮತಿ ಪಡೆಯದೇ ಶಾಮಿಯಾನ ಹಾಕಿದ್ದಾರೆ ಹಾಗೂ ಪ್ರಮುಖ ವೃತ್ತಗಳಲ್ಲಿ ಜನ್ಮದಿನದ ಬ್ಯಾನರ್ ಗಳು ಹಾಕಿದ್ದಾರೆ ಕೂಡಲೇ ತೆರವುಗೊಳಿಸಬೇಕು ಎಂದು ಬಿಜೆಪಿ ಕೆಲ ಮುಖಂಡರು ದೂರು ನೀಡಿದ ಹಿನ್ನೆಲೆಯಲ್ಲಿ ಶಾಮಿಯಾನ ತೆರವುಗೊಳಸಲಾಗಿದೆ. ಬ್ಯಾನರ್ ಗಳು ಅಳವಡಿಸಲು ಶುಲ್ಕ ಬರಿಸಿದ್ದಾರೆ ಆದರೆ ಅನುಮತಿ ನೀಡಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ತಿಳಿಸಿದ್ದಾರೆ.

