Oplus_0

ವಾಡಿ ಪಟ್ಟಣದ ಅಭಿವೃದ್ಧಿಗಾಗಿ ಡಿ.17 ರಿಂದ ಸಹಿ ಸಂಗ್ರಹ ಅಭಿಯಾನ: ವೀರಭದ್ರಪ್ಪ

ನಾಗಾವಿ ಎಕ್ಸಪ್ರೆಸ್ 

ವಾಡಿ: ಪಟ್ಟಣದಲ್ಲಿ ಕೇಂದ್ರ ಬಸ್ ನಿಲ್ದಾಣ, ಸರಕಾರಿ ಕಾಲೇಜು, ಸುಲಭ ಶೌಚಾಲಯ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಡಿಸೆಂಬರ್ 17 ರಿಂದ ಹತ್ತು ದಿನಗಳ ಕಾಲ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜನಧ್ವನಿ ಜಾಗೃತ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ ಹೇಳಿದರು.

ಬುಧವಾರ ಪಟ್ಟಣದಲ್ಲಿ ಜನಧ್ವನಿ ಜಾಗೃತ ಸಮಿತಿ ವತಿಯಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣವು ಪುರಸಭೆ ಆಡಳಿತ ಕೇಂದ್ರ ಸ್ಥಾನ ಹೊಂದಿದೆ. ಆದರೂ ಕನಿಷ್ಠ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ. ಬೃಹತ್ ನೀರು ಶುದ್ಧೀಕರಣ ಘಟಕ ಇದ್ದರೂ ಜನರಿಗೆ ಕುಡಿಯಲು ಶುದ್ಧ ನೀರು ಪೂರೈಕೆಯಾಗುತ್ತಿಲ್ಲ. ಬೀದಿ ದೀಪಗಳ ನಿರ್ವಹಣೆ ನಿರ್ಲಕ್ಷ್ಯದಿಂದಾಗಿ ಹಲವು ಬಡಾವಣೆಗಳಲ್ಲಿ ಕಗ್ಗತ್ತಲು ಆವರಿಸಿದೆ. ಚರಂಡಿಗಳು ಹೂಳು ತುಂಬಿ ಗಬ್ಬು ನಾರುತ್ತಿವೆ. ಸುಲಭ ಶೌಚಾಲಯ ಮತ್ತು ಮೂತ್ರಾಲಯಗಳ ಸೌಕರ್ಯ ಇಲ್ಲ. ಸೊಳ್ಳೆ, ಹಂದಿ, ಬೀದಿನಾಯಿಗಳ ಕಾಟದಿಂದ ಜನರು ಬೇಸತ್ತಿದ್ದಾರೆ. ಇಡೀ ವಾಡಿ ಪಟ್ಟಣ ಸಿಮೆಂಟ್ ಧೂಳಿನಿಂದ ಆವರಿಸಿಕೊಂಡು ಜನರ ಆರೋಗ್ಯ ಹದಗೆಡಿಸಿದೆ.

ಹತ್ತಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ/ಪ್ರೌಢ ಶಾಲೆಗಳಿದ್ದರೂ ಸರ್ಕಾರಿ ಪದವಿಪೂರ್ವ ಕಾಲೇಜು ಒದಗಿಸಿಲ್ಲ. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಬಸ್ ಗಳ ಸಂಚಾರವಿದೆಯಾದರೂ ಕೇಂದ್ರ ಬಸ್ ನಿಲ್ದಾಣ ಸೌಲತ್ತು ಒದಗಿಸಲಾಗಿಲ್ಲ. ಬೀದಿಗಳೇ ಬಸ್ ನಿಲ್ದಾಣಗಳಾಗಿ ಪ್ರಯಾಣಿಕರ ಗೋಳು ಯಾರೂ ಕೇಳದಂತಾಗಿದೆ. ಸಾರ್ವಜನಿಕ ಗ್ರಂಥಾಲಯ, ಮಕ್ಕಳ ಉದ್ಯಾನವನ, ಕ್ರೀಡಾಂಗಣ ಸೇರಿದಂತೆ ಅಗತ್ಯ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸದೆ ದ್ರೋಹ ಎಸಗಲಾಗಿದೆ. ಒಟ್ಟಾರೆ ವಾಡಿ ಪಟ್ಟಣ ಅಭಿವೃದ್ಧಿ ದೃಷ್ಟಿಯಿಂದ ತೀರಾ ಹಿಂದುಳಿದಿದೆ ಎಂಬುದಕ್ಕೆ ಇಲ್ಲಿನ ಸಮಸ್ಯೆಗಳೇ ಸಾಕ್ಷಿಯಾಗಿವೆ ಎಂದು ಆರೋಪಿಸಿದರು.

ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ವಾಡಿ ಪಟ್ಟಣ ನಿವಾಸಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಹತ್ತು ಸಾವಿರ ಸಹಿ ಸಂಗ್ರಹ ಮಾಡಲಾಗುತ್ತಿದೆ. ಪ್ರತಿ ಬಡಾವಣೆಯ ಜನರ ಮನೆ ಬಾಗಿಲಿಗೆ ತೆರಳಿ ಜನರಿಂದ ಸಹಿ ಪಡೆಯಲಾಗುತ್ತದೆ. ಅಂತಿಮವಾಗಿ ಡಿ.30 ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸುವ ಮೂಲಕ ತಹಸೀಲ್ದಾರರಿಗೆ ಹತ್ತು ಸಾವಿರ ಸಹಿ ಹಸ್ತಾಂತರಿಸಲಾಗುವುದು. ಒಟ್ಟಾರೆ ಈ ಸಹಿ ಸಂಗ್ರಹ ಆಂದೋಲನ ವಾಡಿ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ನಡೆಯಲಿದೆ. ಪಕ್ಷಭೇದ ಮರೆತು ಸಾರ್ವಜನಿಕರು ಈ ಚಳುವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜನಧ್ವನಿ ಜಾಗೃತ ಸಮಿತಿ ಉಪಾಧ್ಯಕ್ಷ ಸಿದ್ದಯ್ಯ ಶಾಸ್ತ್ರಿ ನಂದೂರುಮಠ, ಕಾರ್ಯದರ್ಶಿ ಶೇಖ್ ಅಲ್ಲಾಭಕ್ಷ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜನ ಧ್ವನಿ ಜಾಗೃತ ಸಮಿತಿಯ ಗೌರವಾಧ್ಯಕ್ಷ ಜಯದೇವ ಜೋಗಿಕಲ್ ಮಠ, ಉಪಾಧ್ಯಕ್ಷ ಸಿದ್ದಯ್ಯ ಶಾಸ್ತ್ರಿ ನಂದೂರಮಠ, ಕಾರ್ಯದರ್ಶಿ ಶೇಖ್ ಅಲ್ಲಾಭಕ್ಷ್, ಈರಣ್ಣ ಯಲಗಟ್ಟಿ, ವಿಠ್ಠಲ್ ರಾಠೋಡ, ಹರಿಶ್ಚಚಂದ್ರ ಕರಣಿಕ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!