ವಾಡಿ ಪಟ್ಟಣಕ್ಕೆ ಮತ್ತೇ ರಾಡಿ ನೀರು ಪೂರೈಕೆ, ರೋಗಗಳ ಭೀತಿಯಲ್ಲಿ ಸಾರ್ವಜನಿಕರು
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದಲ್ಲಿ ಮತ್ತೆ ರಾಡಿ ನೀರು ಪೂರೈಕೆಯಾಗುತ್ತಿರುವುದರಿಂದ ಸಾರ್ವಜನಿಕರು ಅನಿವಾರ್ಯವಾಗಿ ಬಳಸುವ ಪರಿಸ್ಥಿತಿ ಮುಂದುವರೆದಿದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಪುರಸಭೆ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಹಿತಾಸಕ್ತಿಗಾಗಿಯಾದರೂ ಕ್ರಮಕೈಗೊಳ್ಳಿ ಎಂದು ಸುಮಾರು ಸಲ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರದ ಮೂಲಕ ಗಮನಕ್ಕೆ ತಂದರೂ ಅದೇ ಪರಿಸ್ಥಿತಿ ಮುಂದುವರೆದಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ನೀರು ಶುದ್ಧೀಕರಣ ಘಟಕ ನಿರ್ಮಾಣವಾದರೂ ಸಹ ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಶುದ್ದಿಕರಣಗೊಳ್ಳುತ್ತಿಲ್ಲ. ಇಲ್ಲಿನ ಅನೇಕ ಬಡ ಕುಟುಂಬಗಳು ತಮ್ಮ ದಿನಗೂಲಿಯ ದುಡಿಮೆಯ ದುಡ್ಡನ್ನು ಆಸ್ಪತ್ರೆಗೆ ಹಾಕಿ ಪರದಾಡುತ್ತಿದ್ದಾರೆ.
ಈ ಮಳೆಗಾಲ ಸಂಧರ್ಭದಲ್ಲಿ ಅಶುದ್ಧ ನೀರು ಕುಡಿಯುವುದರಿಂದ ಅನೇಕ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ. ಈಗಲಾದರೂ ಬಳಸಲು ಯೋಗ್ಯ ನೀರನ್ನು ಪೂರೈಸಲು ಪುರಸಭೆ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲಿ, ಇಲ್ಲದೆ ಹೋದರೆ ಕೆಲವೇ ದಿನಗಳಲ್ಲಿ ಪುರಸಭೆ ಎದುರು ಸಾರ್ವಜನಿಕರು ಹಾಗೂ ನಮ್ಮ ಪಕ್ಷದ ಮುಖಂಡರೊಂದಿಗೆ ಶುದ್ಧ ನೀರಿಗಾಗಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
