Oplus_0

ಎಂಎಲ್ಸಿ ಸ್ಥಾನ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದ ಭೀಮಣ್ಣ ಸಾಲಿ ? ಸಚಿವರಿಂದ ಸಮಾಧಾನ, ಬೆಂಗಳೂರಿನಲ್ಲಿ ಹೈಡ್ರಾಮಾ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ರಾಜ್ಯದಲ್ಲಿ ಸಚಿವ ಸ್ಥಾನದ ಖಾತೆ ಹಂಚಿಕೆಯಲ್ಲಿ ಅಸಮಾಧಾನಗೊಂಡು ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಇದು ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವಾಗ, ಎಂಎಲ್ಸಿ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಆಕ್ರೋಶಗೊಂಡ ಭೀಮಣ್ಣ ಸಾಲಿ ತಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿರುವ ವಿಷಯ ಚಿತ್ತಾಪುರ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬ್ಲಾಕ್ ಕಾಂಗ್ರೆಸ್ ಮತ್ತು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ಕೋಲಿ ಸಮಾಜದ ಹಿರಿಯ ಮುಖಂಡರು ಆಗಿರುವ ಭೀಮಣ್ಣ ಸಾಲಿ ಅವರು ಎಂಎಲ್ಸಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು, ಇದಕ್ಕಾಗಿ ಸಾಕಷ್ಟು ಲಾಭಿ ಮಾಡಿದ್ದರು ಅಷ್ಟೇ ಅಲ್ಲ ತಮ್ಮ ಬೆಂಬಲಿಗರಿಂದ ಹಾಗೂ ಕೋಲಿ ಸಮಾಜದ ಮುಖಂಡರಿಂದ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ತೀವ್ರ ಒತ್ತಡ ಹೇರಿದ್ದರು.

ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರಿಂದ ತೆರವಾದ ಸ್ಥಾನಕ್ಕೆ ಭೀಮಣ್ಣ ಸಾಲಿ ಅವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ಕೋಲಿ ಸಮಾಜದ ನೂರಾರು ಮುಖಂಡರ ನಿಯೋಗ ಬುಧವಾರ ಬೆಂಗಳೂರಿನಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇಷ್ಟಾದರೂ ಕಮಕನೂರ ಅವರನ್ನೇ ಪುನಃ ಮೂರನೇ ಬಾರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮುಂದುವರಿಸಿದ್ದೇ ಸಾಲಿ ಅತೃಪ್ತಿಗೆ ಪ್ರಮುಖ ಕಾರಣ ಎನ್ನಲಾಗಿದೆ.

ಎಂಎಲ್ಸಿ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ಭೀಮಣ್ಣ ಸಾಲಿ, ಪಕ್ಷದ ನಿಷ್ಠಾವಂತರಿಗೆ ಬೆಲೆ ಇಲ್ಲ, ಪಕ್ಷ ಬದಲಾಯಿಸುವ, ಪಕ್ಷಕ್ಕೆ ದ್ರೋಹ ಮಾಡುವವರಿಗೆ ಬೆಲೆ ಇದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ತೀವ್ರವಾಗಿ ಅಸಮಾಧಾನ ಹೊರಹಾಕಿದ್ದಾರೆ. 1972 ರಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿದ್ದು ಹಲವಾರು ಎಂಎಲ್ಎ, ಎಂಎಲ್ಸಿ, ಎಂಪಿ ಹಾಗೂ ಗ್ರಾಪಂ, ತಾಪಂ, ಜಿಪಂ ಸೇರಿದಂತೆ ಅನೇಕ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ಶ್ರಮಿಸಿದ್ದೇನೆ. 50 ವರ್ಷದ ರಾಜಕೀಯ ಜೀವನ ಕಾಂಗ್ರೆಸ್ ಪಕ್ಷದಲ್ಲೇ ಮುಗಿದಿದೆ. ನಿಷ್ಠಾವಂತರಿಗೆ ಬೆಲೆ ನೀಡಲಿಲ್ಲ ಎಂದರೆ ಸಾಮಾನ್ಯ ಕಾರ್ಯಕರ್ತರ ಗತಿಯೇನು ಎಂದು ಪ್ರಶ್ನಿಸಿದ್ದಾರೆ.

ತಾಲೂಕಿನ ಬಹುತೇಕ ಕಾರ್ಯಕರ್ತರು, ಬೆಂಬಲಿಗರು ನನ್ನ ಪರವಾಗಿದ್ದರೂ ಸಚಿವರು ಎಂಎಲ್ಸಿ ಸ್ಥಾನ ಕಲ್ಪಿಸುವಲ್ಲಿ ನಿರಾಸಕ್ತಿ ತೋರಿದ್ದಾರೆ. ಹೀಗಾಗಿ ನಾನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೇನೆ ಎಂದು ತಿಳಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಅವರಿಗೆ ಸಂಪರ್ಕಿಸಲಾಗಿದೆ ಆದರೆ ಅವರು ಕೈಗೆ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಶರಣಪ್ರಕಾಶ ಪಾಟೀಲ ಅವರು ಅತೃಪ್ತಗೊಂಡ ಭೀಮಣ್ಣ ಸಾಲಿ ಅವರನ್ನು ಸಮಾಧಾನ ಮಾಡಿ ಸಿಎಂ ಡಿ.ಕೆ.ಶಿವಕುಮಾರ್ ಬಳಿ ಕರೆಯಿಸಿ ಸೂಕ್ತ ಸ್ಥಾನಮಾನದ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೂ ಭೀಮಣ್ಣ ಸಾಲಿ ಮಾತ್ರ ಯಾವುದಕ್ಕೂ ಬಗ್ಗದೆ ಪಟ್ಟು ಹಿಡಿದಿದ್ದಾರೆ. ನಾನು ಕೇಳಿದ್ದು ಎಂಎಲ್ಸಿ ಅದರ ಬದಲು ನಿಗಮ ಮಂಡಳಿ ಸ್ಥಾನ ನೀಡಿದರೆ ಎನ್ ಪ್ರಯೋಜನ, ಜನರ ಯಾವುದೇ ಕೆಲಸ ಮಾಡಲು ಆಗುವುದಿಲ್ಲ ಎಂದು ಮನದಾಳದ ಮಾತು ಹೊರಹಾಕಿದ್ದಾರೆ.

ತೀವ್ರ ಅತೃಪ್ತಗೊಂಡ ಹಾಗೂ ಅಸಮಾಧಾನಲ್ಲಿದ್ದ ಭೀಮಣ್ಣ ಸಾಲಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ವರಿಷ್ಠರ ಮಾತಿಗೆ ತಲೆಬಾಗಿ ನಡೆಯುತ್ತಾರೋ ಅಥವಾ ಎಂಎಲ್ಸಿ ಸ್ಥಾನದ ಬಿಗಿ ಪಟ್ಟುನಿಂದ ಹೊರಬರುತ್ತಾರೆ ಎಂಬುದು ಕಾದುನೋಡಬೇಕಿದೆ.

Spread the love

Leave a Reply

Your email address will not be published. Required fields are marked *

You missed

error: Content is protected !!