ಆರ್.ಎಸ್.ಎಸ್ ನಿಷೇಧಕ್ಕೆ ಆಗ್ರಹಿಸಿ ಜು.7 ರಂದು ಲಚ್ಚಪ್ಪ ಜಮಾದಾರ ನೇತೃತ್ವದ ಹೋರಾಟಕ್ಕೆ ಚಿತ್ತಾಪುರ ಕಾಂಗ್ರೆಸ್ ಮುಖಂಡರಿಂದ ಬೆಂಬಲ ಘೋಷಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಜ್ಯದಲ್ಲಿ ಆರ್.ಎಸ್.ಎಸ್ ನಿಷೇಧಿಸಬೇಕು ಎಂದು ಒತ್ತಾಯಿಸಿ ಜು.7 ರಂದು ಕಲಬುರಗಿ ನಗರದಲ್ಲಿ ಲಚ್ಚಪ್ಪ ಜಮಾದಾರ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಹೋರಾಟಕ್ಕೆ ಚಿತ್ತಾಪುರ ತಾಲೂಕಿನ ಕಾಂಗ್ರೆಸ್ ಮುಖಂಡರಿಂದ ಬೆಂಬಲ ಘೋಷಿಸಿದ್ದು, ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರಾದ ಹಣಮಂತ ಸಂಕನೂರ, ದೇವಿಂದ್ರ ಅರಣಕಲ್, ಬಸವರಾಜ ಚಿನ್ನಮಳ್ಳಿ ಅವರು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಸಂವಿಧಾನ ಅಸ್ತಿತ್ವದಲ್ಲಿದ್ದು ಅದರ ಪ್ರಕಾರ ದೇಶದ ಪ್ರಜಾಪ್ರಭುತ್ವ, ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗ ಕಾರ್ಯನಿರ್ವಹಿಸುತ್ತೀವೆ. ಸಂವಿಧಾನ ಮತ್ತು ಕಾನೂನು ಮುಂದೆ ಎಲ್ಲರೂ ಸಮಾನರು ಮತ್ತು ಸ್ವತಂತ್ರರು. ಕಾನೂನಿಗಿಂತ ದೊಡ್ಡವರು ಯಾರಿಲ್ಲ. ಆದರೆ, ದೇಶ ನಮ್ಮದು, ಹಿಂದೂ ಧರ್ಮದ ವಾರಸುದಾರರು ನಾವೇ, ನಮಗೆ ಸಂವಿಧಾನ, ಕಾನೂನು ಬೇಕಿಲ್ಲ ಎನ್ನುವ ಕೆಲವರ ಮನೋಭಾವ ಅತ್ಯಂತ ಅಪಾಯಕಾರಿಯಾಗಿದೆ. ಅಂತಹ ಅಪಾಯಕಾರಿ ಮನೋಭಾವ ನಿರ್ಮೂಲನೆಗೊಳಿಸುವುದು ಅತ್ಯಂತ ಅಗತ್ಯವಿದೆ ಎಂದು ಹೇಳಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್.ಎಸ್.ಎಸ್ ಬಗ್ಗೆ ಎತ್ತಿರುವ ಪ್ರಶ್ನೆಗಳು ಸಂವಿಧಾನದ ಪ್ರಕಾರದ ಹೆಜ್ಜೆಯಾಗಿದೆ. ಇಡೀ ದೇಶ ಸಂವಿಧಾನ ಪಾಲಿಸುತ್ತಿರುವಾಗ ಒಂದು ಸಂಘಟನೆ ಅದು ಹೇಗೆ ಕಾನೂನಿಂದ ಹೊರಗುಳಿಯಲು ಹೇಗೆ ಸಾಧ್ಯ? ಪ್ರಿಯಾಂಕ್ ಅವರ ಪ್ರಶ್ನೆಗಳಿಗೆ ಕಾನೂನು ಪ್ರಕಾರ ಉತ್ತರ ನೀಡಲಾಗದೆ ಬಿಜೆಪಿಗರು ತಮ್ಮ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವುದು ಸಂವಿಧಾನ ಒಪ್ಪದ ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಯಾವುದೇ ಧರ್ಮದ (ಹಿಂದೂ, ಮುಸ್ಲಿಂ, ಬೌದ್ಧ, ಸಿಖ್, ಕ್ರಿಶ್ಚಿಯನ್) ಸಂಘ ಮತ್ತು ಸಂಸ್ಥೆಗಳು ರಚಿಸುವುದು, ನಿರ್ವಹಣೆ ಮಾಡುವುದನ್ನು ಸಂವಿಧಾನದ ಪ್ರಕಾರ ಮತ್ತು ಸಂಘ ಸಂಸ್ಥೆಗಳ ನೋಂದಣಿ ಅಧಿನಿಯಮದ ಪ್ರಕಾರ ಕಾನೂನುಬದ್ದಗೊಳಿಸಿ ಕಾನೂನು ಮತ್ತು ನಿಯಮ ರೂಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಸಂವಿಧಾನದ ಅನುಚ್ಛೇದ 19-19(1) ರಲ್ಲಿ ದೇಶದ ಸಮಸ್ತ ನಾಗರಿಕರಿಗೆ ಉಪ ಖಂಡ (ಸಿ) ಪ್ರಕಾರ ಸಂಸ್ಥೆಗಳನ್ನು ಅಥವಾ ಸಂಘಗಳನ್ನು ರಚಿಸುವ (ಅಥವಾ ಸಹಕಾರಿ ಸಂಘಗಳ) ಹಕ್ಕು ಹೊಂದಿರತಕ್ಕದ್ದು ಎಂದು ಸ್ವಾತಂತ್ರ್ಯ ನೀಡಿದೆ. ಈ ಹಕ್ಕು ಚಲಾಯಿಸುವ ಸಂಬಂಧ ನಿರ್ಬಂಧ ಮಾಡಲು, ಕಾನೂನು ರಚನೆ ಮಾಡಲು ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಸಂವಿಧಾನವು ಉಪ ಖಂಡ (4) ರಡಿ ಅಧಿಕಾರ ನೀಡಿದೆ. ಅದನ್ನು ಬಳಸಿಕೊಂಡು ರಾಜ್ಯ ಸರ್ಕಾರ ಕಾನೂನು ರೂಪಿಸಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಿಂಗಣ್ಣ ಹೆಗಲೇರಿ, ಭೀಮರಾಯ ಹೊತಿನಮಡಿ, ಮಲ್ಲಿಕಾರ್ಜುನ ಸಂಗಾವಿ, ಪ್ರಭು ಹಲಕರ್ಟಿ, ಬಸವರಾಜ ಮೈನಾಳಕರ್ ಇದ್ದರು.
“ಗೃಹ ಸಚಿವರು ಎತ್ತಿರುವ ಪ್ರಶ್ನೆಗಳಿಗೆ ಇಡೀ ದೇಶದಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ. ನೋಂದಣಿಯಾಗದ ಸಂಘ ನಿಷೇಧಿಸಬೇಕು ಎನ್ನುವ ಒತ್ತಾಯ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಜು.7 ರಂದು ಕಲಬುರಗಿ ನಗರದಲ್ಲಿ ಲಚ್ಚಪ್ಪ ಜಮಾದಾರ ಹಮ್ಮಿಕೊಂಡಿರುವ ಹೋರಾಟದಲ್ಲಿ ಸಂವಿಧಾನ ಮತ್ತು ಕಾನೂನು ಪರವಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು”.-ಹಣಮಂತ ಸಂಕನೂರ ಕಾಂಗ್ರೆಸ್ ಮುಖಂಡರು.

