ಯುವಕರ ಭವಿಷ್ಯ ರೂಪಿಸಲು ಹಾಗೂ‌ ಆರ್ಥಿಕ ಪ್ರಗತಿ ಕೈಗೊಳ್ಳಲು ನೀಲಿನಕ್ಷೆ ತಯಾರಿಸುವಂತೆ ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಯುವ ಕರ್ನಾಟಕದ ನಿರ್ಮಾಣ ಸರ್ಕಾರದ‌ ಸಂಕಲ್ಪವಾಗಿದೆ. ಮುಂದಿನ ಭವಿಷ್ಯ ಯುವಕರ ಕೈಯಲ್ಲಿ ಇರುವುದರಿಂದಾಗಿ ಯುವಕರಿಗಾಗಿ ಯೋಜನೆಗಳನ್ನು ತರಲು ಸಿಎಂ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ದಿ ಹಾಗೂ ಆರ್ಥಿಕ‌ ಪ್ರಗತಿಗಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮ ಹಾಗೂ ಯೋಜನೆಗಳ ನೀಲಿನಕ್ಷೆ ತಯಾರಿಸಲು ಈಗಾಗಲೇ ಹೇಳಿದ್ದಾರೆ ಎಂದರು.

ಸೂಪರ್ ಎಲ್ ನೀನೋ ಎಫೆಕ್ಟ್ ನಿಂದಾಗಿ ಮಳೆ ಕೊರತೆಯಾಗುತ್ತದೆ. ಬೆಳೆಗಳಿಗೆ ಸಂಕಷ್ಟವಾಗಲಿದೆ. ಹಾಗಾಗಿ, ಸಿಎಂ‌ ಎರಡು ಸಲ ಸಭೆ ನಡೆಸಿ ಕುಡಿಯುವ ನೀರು,‌ ಮೇವು ಹಾಗೂ ಬರದ ಬಗ್ಗೆ ತಿಳಿಯಲು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಈಗ ಮತ್ತೆ ಕಂದಾಯ ವಿಭಾಗದ ಅಧಿಕಾರಿಗಳ ಸಭೆಯನ್ನು ಮಂಗಳವಾರ ಕಲಬುರಗಿ ಯಲ್ಲಿ ನಡೆಸಲಿದ್ದಾರೆ ಎಂದರು.

ನಾಳೆ ಸಿಎಂ ಬೀದರ್ ಗೆ ಆಗಮಿಸಿ‌ ಬಸವಕಲ್ಯಾಣಕ್ಕೆ‌ ಮೊದಲು ಭೇಟಿ ನೀಡಲಿದ್ದಾರೆ.‌ ಸಂಜೆ ವೇಳೆಗೆ ಕಲಬುರಗಿಗೆ ಬರಲಿದ್ದಾರೆ.‌ ನಂತರ, ಸಮಯಾವಕಾಶಕ್ಕೆ‌ ಅನುಗುಣವಾಗಿ ಶರಣಬಸವೇಶ್ವರ ದೇವಾಲಯ‌ ಹಾಗೂ ದರ್ಗಾಕ್ಕೆ ಬೇಟಿ‌ ನೀಡಲಿದ್ದಾರೆ.

ನಾಡಿದ್ದು ಅಂದರೆ, ಮಂಗಳವಾರ ವಿಭಾಗೀಯ ಮಟ್ಟದ‌ ಅಧಿಕಾರಿಗಳ ಸಭೆ ನಡೆಸಲಿದ್ದು ಬರ ಪರಿಸ್ಥಿತಿ ಹಾಗೂ ಬರ ಎದುರಿಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸುರ್ದೀರ್ಘ ಚರ್ಚೆ ನಡೆಸಲಿದ್ದಾರೆ.‌ ನಂತರ,‌ ಮಾಧ್ಯಮಗಳಿಗೆ ವಿವರಣೆ‌ ನೀಡಲಿದ್ದಾರೆ ಎಂದರು.

ಈ ಭಾಗದಲ್ಲಿ ಆಣೆಕಟ್ಟುಗಳ ಭೇಟಿಗೆ ಸಿಎಂ ಅವರಿಂದ ಯಾವುದೇ ಭೇಟಿ ನಿಗದಿಯಾಗಿಲ್ಲ. ಎನ್ ಡಿ ಆರ್ ಎಫ್ ಪ್ರಕಾರ 35% ಮಳೆ ಕೊರತೆಯಾಗಿದೆ. ಸಂಪೂರ್ಣವಾಗಿ ಮುಂಗಾರು ಕೈಕೊಟ್ಟಿಲ್ಲ. ತೊಗರಿ, ಸೂರ್ಯಕಾಂತಿ ಯನ್ನು ಜುಲೈ ಕೊನೆಯ ವಾರದ‌ವರೆಗೆ ಬಿತ್ತನೆ ಮಾಡಬಹುದಾಗಿದೆ. ಮೋಡ ಬಿತ್ತನೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿಲ್ಲ. ಯಾವುದೇ ಕ್ರಮವಹಿಸಿದರು ಅದು ವೈಜ್ಞಾನಿಕವಾಗಿ ನಡೆಸಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಜಿಲ್ಲೆಯಲ್ಲಿ ಕುಡಿಯುವ‌ ನೀರಿನ ಸಮಸ್ಯೆ ಇದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು,‌ಸಧ್ಯಕ್ಕೆ‌ ಲಭ್ಯವಿರುವ ನೀರು ಮುಂದಿನ 45 ದಿನಗಳವರೆಗೆ ಸಾಕಾಗಬಹುದು.ರಾಜ್ಯ ಸರ್ಕಾರ ನೆರೆ‌ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಕುಡಿಯುವ‌ ನೀರು ಒದಗಿಸುವ‌ ಕುರಿತಂತೆ ಕೋರಿ ಪತ್ರಬರೆಯಲಾಗಿದೆ ಈ ಬಗ್ಗೆ ಮಂಗಳವಾರ ಸಿಎಂ ಚರ್ಚೆ ನಡೆಸಲಿದ್ದಾರೆ ಎಂದರು.

ಎಸ್ ಐ ಆರ್ ಸರಿಯಾಗಿ ನಡೆಯುತ್ತಿಲ್ಲ ಕಲ್ಯಾಣ ಮಂಟಪದಲ್ಲಿ, ದರ್ಗಾದಲ್ಲಿ‌ ನಡೆಯುತ್ತಿದೆ ಎಂದರೆ ಅದರ‌ ಜವಾಬ್ದಾರಿ ಚುನಾವಣೆ ಆಯೋಗದ್ದೆ ಹೊರತು‌ ಸರ್ಕಾರದಲ್ಲ‌ ಎಂದು ಸ್ಪಷ್ಟಪಡಿಸಿದ‌ ಸಚಿವರು, ಸರ್ಕಾರದ ‌ಅಧಿಕಾರಿಗಳನ್ನು ನಾವು ಆಯೋಗಕ್ಕೆ‌ ಕೊಟ್ಟಿದ್ದೇವೆ. ಅದರಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ. ಎಸ್ ಐ ಆರ್ ಕುರಿತಂತೆ ಪಾರದರ್ಶಕ ವಾಗಿ ನಡೆಸಲು‌ ಚುನಾವಣೆ ಆಯೋಗಕ್ಕೆ ನಾನೇ ಖುದ್ದಾಗಿ 12 ಪ್ರಶ್ನೆ ಕೇಳಿದ್ದೇನೆ. ಅದಕ್ಕೆ‌ ಅವರು ನಮಗೆ ಸಮಯ ಕೊಟ್ಟಿಲ್ಲ. ಆದರೆ,‌ ವಿಜಯೇಂದ್ರ ಅವರಿಗೆ ಸಮಯಾವಕಾಶ ಕೊಟ್ಟಿದ್ದಾರೆ. ಹಾಗಾದರೆ,‌ ಆಯೋಗ ಯಾರ ಅಡಿಯಲ್ಲಿ ಕೆಲಸ‌ ನಡೆಸುತ್ತಿದೆ ? ಎಂದು ಪ್ರಶ್ನಿಸಿದರು.

ಎಸ್ ಐ ಆರ್ ರದ್ದು ಮಾಡುವಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು‌ ಪುಷ್ಠಿಕರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಎಸ್ ಐ ಆರ್ ಸರಿಯಾಗಿ ನಡೆಸುವಂತೆ ನಾವೂ ಕೂಡಾ ಒತ್ತಾಯಿಸುತ್ತಿದ್ದೇವೆ. ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಸರಿಯಾಗಿ ನಡೆಸಲಿ ಎಂದರು.

ಗೃಹ ಇಲಾಖೆಯ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ‌ ಸಚಿವರು ಅಗತ್ಯವಿರುವ ಕಡೆ ನೂತನ ಪೊಲೀಸ್ ಠಾಣೆ ಸ್ಥಾಪನೆ ಸೇರಿದಂತೆ ತರಬಹುದಾದ ಬದಲಾವಣೆಗಳ ಬಗ್ಗೆ ಒಂದು ವಾರದ ನಂತರ ವಿವರವಾಗಿ ಚರ್ಚಿಸುವುದಾಗಿ ಸಚಿವರು ಹೇಳಿದರು.

ಹೊರರಾಜ್ಯದ ಅಧಿಕಾರಿಗಳನ್ನು ರಾಜ್ಯದಲ್ಲಿ ಬಳಸಿಕೊಳ್ಳುವಂತೆ ಬಿಜೆಪಿ ಒತ್ತಾಯಿಸುತ್ತಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯಿಸಿದ ಸಚಿವ ಶರಣಪ್ರಕಾಶ್ ಪಾಟೀಲ್, ಬೇರೆ ರಾಜ್ಯದ ಅಧಿಕಾರಿಗಳ ಮೂಲಕ ಇಡೀ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ಬಿಜೆಪಿ ನಡೆಸಿದೆ ಎಂದು ಅವರು ಆರೋಪಿಸಿದರು.

ತನಿಖಾ‌ ಸಂಸ್ಥೆಗಳು ನಡೆಸಿದ ದಾಳಿಗೆ ಒಳಗಾದವರು ಬಿಜೆಪಿಗೆ ದೇಣಿಗೆ ನೀಡಿದ್ದಾರೆ ಎಂದ ಪಾಟೀಲ್, ಕೇಂದ್ರ ಚುನಾವಣೆ ಆಯೋಗದ ಕಮೀಷನರ್ ನೇಮಕ ಪ್ರಕ್ರಿಯೆಯನ್ನು ಸಂಪೂರ್ಣ ಬದಲಾವಣೆಯನ್ನು ಕೇಂದ್ರ ಸರಕಾರ ಮಾಡಿದೆ. ನೇಮಕ ಸಮಿತಿಯಿಂದ ನ್ಯಾಯಮೂರ್ತಿಗಳನ್ನು ಹೊರಗಡೆ ಇಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕರಾದ ಎಂ.ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ ಸೇರಿದಂತೆ ಹಲವರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!