ತವರಿನಲ್ಲಿ ಸಿಕ್ಕ ಭವ್ಯ ಸ್ವಾಗತಕ್ಕೆ ಋಣಿ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ತವರಿನಲ್ಲಿ ಕಾರ್ಯಕರ್ತರ, ಅಭಿಮಾನಿಗಳ ಹಾಗೂ ಹಿರಿಯ ನಾಯಕರ ಅಭಿಮಾನದ ಸ್ವಾಗತಕ್ಕೆ ಋಣಿಯಾಗಿರುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಗೃಹ, ಐಟಿಬಿಟಿ, ಇ ಆಡಳಿತ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ಕಲಬುರಗಿ ನಗರಕ್ಕೆ ಭಾನುವಾರ ಆಗಮಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ತಮಗೆ ಅವಕಾಶ ಕಲ್ಪಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ಧನ್ಯವಾದಗಳು ಎಂದ ಖರ್ಗೆ, ಆಡಳಿತದ ವಿಚಾರದಲ್ಲಿ ಮಾತ್ರ ನಾನು ಗೃಹ, ಐಟಿಬಿಟಿ ಹಾಗೂ ಇ ಆಡಳಿತ ಖಾತೆ ಸಚಿವ. ಆದರೆ, ಕಾಂಗ್ರೆಸ್ ಪಕ್ಷದ ಕಚೇರಿ ಒಳಗೆ ಬಂದರೆ ನಾನು ಸಾಮಾನ್ಯ ಕಾರ್ಯಕರ್ತ ನನಗೆ ಜಗದೇವ ಗುತ್ತೇದಾರ, ಭೀಮಣ್ಣ ಸಾಲಿ ಹಾಗೂ ಮಹೆಬೂಬ್ ಸಾಹೇಬ್ ಹೈಕಮಾಂಡ್ ಎಂದು ವಿನಮ್ರವಾಗಿ ನುಡಿದರು.
ಕಳೆದ ಅವಧಿಯ ನಮ್ಮ ಸರ್ಕಾರ ರೂ.1400 ಕೋಟಿ ಗಳಷ್ಟು ಪಂಚಾಯತಿ ಮಟ್ಟದಲ್ಲಿ ರೆವೆನ್ಯೂ ಕಲೆಕ್ಷನ್ ಮಾಡಿದೆ. ರೂ 1600 ಕೋಟಿ ಖರ್ಚು ಮಾಡಿ ಕುಡಿಯುವ ನೀರಿನ ಯೋಜನೆ ಜಾರಿಗೆ ಚಾಲನೆ ನೀಡಲಾಗಿದೆ. ಪ್ರತಿ ಪಂಚಾಯತಿಗೆ ಜನಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದೇವೆ ಎಂದರು.
ನಮ್ಮ ಅವಧಿಯಲ್ಲಿ ಗ್ರಾಮಾಣಾಭಿವೃದ್ದಿ ಹಾಗೂ ಪಂಚಾಯತ್ ಇಲಾಖೆಯಲ್ಲಿ ನಡೆದ ಅಭಿವೃದ್ದಿಯಿಂದಾಗಿ ಗುತ್ತಿಗೆದಾರರ ಅಸೋಷಿಯೇಷನ್, ಪಿಡಿಎ ಅಸೋಷಿಯಷೇನ್ ಹಾಗೂ ಪ್ರಧಾನ ಮಂತ್ರಿ ಮೋದಿ ಸರ್ಕಾರ ನನಗೆ ಸರ್ಟಿಫಿಕೇಟ್ ಕೊಟ್ಟಿದೆ. ಐಟಿ ಬಿಟಿಯಲ್ಲಿ ರಾಜ್ಯ ನಂಬರ್ ಒನ್ ಆಗಿದೆ. ಇದಕ್ಕೆ ಮೋದಿ ಸರ್ಕಾರ ಪ್ರಶಂಸೆ ನೀಡಿದೆ. ಬಿಜೆಪಿ ನಾಯಕರು ಇದನ್ನು ಗಮನಿಸಲಿ ಎಂದರು.
ಟೆಕ್ಸಟೈಲ್ಸ್ ಪಾರ್ಕ್ ಗೆ ರೂ.350 ಕೋಟಿ ಬಿಡುಗಡೆ ಮಾಡಲಾಗಿದೆ. ರೈತರಿಗೆ ಪರಿಹಾರವಾಗಿ ರೂ 640 ಕೋಟಿ ಬಿಡುಗಡೆ ಮಾಡಲಾಗಿದೆ. ಈಗಿನ ಸರ್ಕಾರದಲ್ಲಿ 7,000 ಪೊಲೀಸರ ನೇಮಕಾತಿ ನಡೆಸಲಾಗುತ್ತಿದೆ. ಇದೆಲ್ಲ ಸಾಧ್ಯವಾದದ್ದು ನನ್ನಿಂದಲ್ಲ ನಿಮ್ಮಿಂದ. ನೀವು ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ಸಚಿವನಾಗಿರುವುದಕ್ಕೆ ಸಾಧ್ಯವಾಗಿದೆ ಎಂದರು.
ಎಸ್ಐಆರ್ ಬಗ್ಗೆ ಜಾಗೃತಿ ವಹಿಸಿ:
ಎಸ್ಐಆರ್ ನಡೆಯುತ್ತಿದೆ. ಈ ಬಗ್ಗೆ ನೀವೆಲ್ಲ ಜಾಗೃತರಾಗಿರಬೇಕು. ಪಶ್ಚಿಮ ಬಂಗಾಲದಲ್ಲಿ ಒಂದು ಕೋಟಿ ಓಟರ್ ಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಇಲ್ಲಿ ಹಾಗೆ ಆಗಬಾರದು. ಕೇರಳ, ತಮಿಳುನಾಡುಗಳಲ್ಲಿಯೂ ಕೂಡಾ ಇದೇ ಪ್ರಯತ್ನ ನಡೆಸಲಾಗಿತ್ತು. ಆದರೆ, ಪ.ಬಂಗಾಳ ತರ ಆಗಲಿಲ್ಲ. ಅದಕ್ಕಾಗಿ ನಾವು ಹನ್ನೆರಡು ಪ್ರಶ್ನೆ ಕೇಳಿದ್ದೆವು. ಅದಕ್ಕೆ ಉತ್ತರ ಸಿಕ್ಕಿಲ್ಲ. ಒಂದು ವೇಳೆ ಎಸ್ ಐ ಆರ್ ಸಂದರ್ಭದಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟರೆ ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲ. ಈ ಬಗ್ಗೆ ನೀವೆಲ್ಲ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.
ಆರ್.ಎಸ್.ಎಸ್ ಲೆಕ್ಕ ಕೊಡಲಿ:
ನಾನು ಆರ್ ಎಸ್ ಎಸ್ ನೋಂದಣಿ ಬಗ್ಗೆ ಪ್ರಶ್ನೆ ಮಾಡಿದ್ದೆ. ದಿನಕ್ಕೆ 4200 ಕಡೆ ಭೇಟಿಯಾಗುತ್ತಾರೆ. 2200 ಕಡೆ ಪಥಸಂಚಲನ ನಡೆಸುತ್ತಾರೆ. 20 ಲಕ್ಷ ಜನ ಸೇರುತ್ತಾರಂತೆ. ಈ ದೇಶದಲ್ಲಿ ಪ್ರತಿಯೊಂದು ಸಂಘಟನೆಯೂ ಕೂಡಾ ಲೆಕ್ಕ ಕೊಡಬೇಕು. ಸ್ವಾತಂತ್ರ್ಯ ಸಿಕ್ಕ 52 ವರ್ಷಗಳ ಕಾಲ ರಾಷ್ಟ್ರದ ಧ್ವಜವನ್ನು ತಮ್ಮ ಕಚೇರಿಯ ಮೇಲೆ ಹಾರಿಸಲಿಲ್ಲ ಯಾಕೆ? ಈಗ ಎಲ್ಲಾ ಚೆಂದಾ ಚೋರಿ ಚರ್ಚೆ ನಡೆಯುತ್ತಿದೆ. ರಾಮನೂ ಕೂಡಾ ಲೆಕ್ಕ ಕೊಡಬೇಕು. ಆದರೆ, ಆರ್ ಎಸ್ ಎಸ್ ಲೆಕ್ಕ ತೋರಿಸುವುದಿಲ್ಲವಂತೆ.
ಆರ್ ಎಸ್ ಎಸ್ ಗೆ ಕಾನೂನಿನ ಅಡಿಯಲ್ಲಿ ನಾನು ಬರೆದ ಪತ್ರಕ್ಕೆ ಅವರು ಇನ್ನೂ ಉತ್ತರಿಸಿಲ್ಲ. ಕಾನೂನಿನ ಅಡಿಯಲ್ಲೇ ಎಲ್ಲವನ್ನೂ ನೋಡಿಕೊಳ್ಳುತ್ತೇನೆ. ದಾಖಲೆಗಳನ್ನು ತೆಗೆದಿರಿಸಲು ಹೇಳಿದ್ದೇನೆ. ನೂರು ವರ್ಷದ ಸಂಘಟನೆಯಲ್ಲವೇ ದಾಖಲೆ ಹುಡುಕುತ್ತಿರಬಹುದು ಎಂದ ಗೃಹ ಸಚಿವರು, ಪ್ರತಿಯೊಬ್ಬರು ನೂರು ರೂಪಾಯಿ ಸಂಪಾದನೆ ಮಾಡಿದರೂ ತೆರಿಗೆ ಕಟ್ಟಲೇಬೇಕು. ಆದರೆ, ಆರ್ ಎಸ್ ಎಸ್ ತೆರಿಗೆ ಕಟ್ಟಲ್ಲವಂತೆ. ಯಾಕೆ? ಈ ಬಗ್ಗೆ ಚರ್ಚಿಸಲು ನಾನೆ ಅವರ ಕಚೇರಿಗೆ ಹೋಗಲು ತಯಾರಿದ್ದೇನೆ. ನಾನು ನನ್ನ ಕುಟುಂಬದ ಆಸ್ತಿ ವಿವರ ಕೊಡುತ್ತೇನೆ. ಅವರೂ ವಿವರ ಕೊಡಲಿ ಎಂದು ಸವಾಲಾಕಿದರು.
ದೇವರ ಹುಂಡಿ ಹೊಡೆಯುವವರಿಗೆಲ್ಲಾ “ಜೀ” ಯಾಕೆ?:
ರಾಮಮಂದಿರ ಹುಂಡಿಕಳ್ಳತನದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ದೇವರ ಹುಂಡಿ ಹೊಡೆಯುವವರಿಗೆಲ್ಲಾ “ಜೀ” ಯಾಕೆ? ಚೆಂದಾ ಚೋರಿ ಮಾಡಿರುವ ಗೋಪಾಲ್ ಜೀ ಗೆ ಯಾಕೆ ಜೀ. ಮರ್ಯಾದೆ ಇರದವರಿಗೆಲ್ಲ ಜೀ ಎಂದು ಮಾರ್ಯಾದೆ ಯಾಕೆ? ಎಂದು ವ್ಯಂಗ್ಯವಾಡಿದರು.
ರಾಮಮಂದಿರದ ಪ್ರತಿಯೊಂದು ಕೆಲಸವೂ ಸೇರಿದಂತೆ ಪ್ರಾಣಪ್ರತಿಷ್ಠಾನವೂ ಕೂಡಾ ಮೋದಿ ಮಾಡಿದ್ದಾರೆ. ಹಾಗಾಗಿ, ಚೆಂದಾ ಚೋರಿಯ ಕ್ರೆಡಿಟ್ ಕೂಡಾ ತೆಗೆದುಕೊಳ್ಳಲಿ. ಯಾಕೆ ಈ ಬಗ್ಗೆ ಮನ್ ಕೀ ಬಾತ್ ನಲ್ಲಿ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ವೇದಿಕೆಯ ಮೇಲೆ ಶಾಸಕರಾದ ಹಾಗೂ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಎಂ.ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಮಹಾನಗರ ಪಾಲಿಕೆ ಮೇಯರ್ ವರ್ಷಾ ಜಾನೆ, ತೊಗರಿ ಮಂಡಳಿ ಅಧ್ಯಕ್ಷ ಮಹೆಬೂಬ್ ಸಾಹೇಬ್ ಚಿಸ್ತಿ, ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರು, ರೇವುನಾಯಕ ಬೆಳಮಗಿ, ಕುಡಾ ಅಧ್ಯಕ್ಷ ಮಹಜರ್ ಆಲಂಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಶಿವಾನಂದ್ ಪಾಟೀಲ್, ಆರ್. ಕೆ. ಪಾಟೀಲ್, ನೀಲಕಂಠರಾವ್ ಮೂಲಗೆ, ಸುಭಾಷ್ ರಾಠೋಡ್, ಶರಣಪ್ಪ ಮಟ್ಟೂರು, ಶ್ರೀನಿವಾಸ್ ಸಗರ, ರಾಜಗೋಪಾಲ ಮುದಿರೆಡ್ಡಿ, ಸೋಮಶೇಖರ್ ಗೋನಾಯಕ್, ಡಾ ಕಿರಣ್ ಪಾಟೀಲ್, ಶರಣು ಪಪ್ಪಾ ಸೇರಿದಂತೆ ಹಲವರಿದ್ದರು.
