ಜಲಾಶಯಗಳ ನೀರನ್ನು ಇತರ ಯಾವುದೇ ಉದ್ದೇಶಗಳಿಗೆ ಬಳಸದೆ, ಕುಡಿಯುವ ನೀರಿನ ಉದ್ದೇಶಕ್ಕಷ್ಟೇ ಬಳಸುವಂತೆ: ಜಿಲ್ಲಾಧಿಕಾರಿ ಕರೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಸರ್ಕಾರದ ಜಲಸಂಪನ್ಮೂಲ ಇಲಾಖೆ ಹಾಗೂ ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಇವರ ಸೂಚನೆಯಂತೆ, ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಜಲಾಶಯಗಳ ನೀರನ್ನು ಇತರ ಯಾವುದೇ ಉದ್ದೇಶಗಳಿಗೆ ಬಳಸದೆ, ಕುಡಿಯುವ ನೀರಿನ ಉದ್ದೇಶಕ್ಕಷ್ಟೇ ಬಳಸುವಂತೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಿರುವ ಕಾರಣ, ಕಲಬುರಗಿ ಜಿಲ್ಲೆಯ ಬೇಣ್ಣೆತೋರಾ, ಚಂದ್ರಂಪಳ್ಳಿ, ಗಂಡೋರಿ ನಾಲಾ, ಕೆಳದಂಡ ಮುಲ್ಲಾಮಾರಿ, ಸೋನ್ನ ಬ್ಯಾರೇಜ್ ಹಾಗೂ ಅಮರ್ಜಾ ಜಲಾಶಯಗಳಲ್ಲಿ ಪ್ರಸ್ತುತ ಲಭ್ಯವಿರುವ ನೀರನ್ನು ಮುಂಬರುವ ದಿನಗಳಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಉಪಯೋಗಕ್ಕೆ ಮಾತ್ರ ಕಾಯ್ದಿರಿಸಿ, ಇತರ ಯಾವುದೇ ಉದ್ದೇಶಗಳಿಗೆ ಜಲಾಶಯದ ನೀರನ್ನು ಬಳಸದೆ, ಕುಡಿಯುವ ನೀರಿನ ಉದ್ದೇಶಕ್ಕಷ್ಟೇ ಬೆಳೆಸಬೇಕು ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.

