ಗುರುಪೂರ್ಣಿಮೆ ಪ್ರಯುಕ್ತ ಜು. 29 ರಂದು ಕಲಬುರಗಿಯಲ್ಲಿ ನಾಲವಾರ ಶ್ರೀಗಳ ಗುರುವಂದನಾ ಕಾರ್ಯಕ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗುರುಪೂರ್ಣಿಮೆಯ ನಿಮಿತ್ತವಾಗಿ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮವನ್ನು ಜುಲೈ 29 ರ ಬುಧವಾರ ಕಲಬುರಗಿ ನಗರದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.
ಕಲಬುರಗಿ ನಗರದ ಕರುಣೇಶ್ವರ ನಗರದಲ್ಲಿರುವ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನದ ಶಾಖಾಮಠದಲ್ಲಿ ಬುಧವಾರ ಸಂಜೆ 5 ಗಂಟೆಗೆ ಈ ಬಾರಿಯ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಲಿದೆ.
ಗುರುವಂದನೆಯ ನಿಮಿತ್ತವಾಗಿ, ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ನಂತರ ಪರಮಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಭಕ್ತರಿಂದ ಮಹಾಪಾದ ಪೂಜೆ, ಗುರುಕಾಣಿಕೆ ಸಮರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಸಾವಿರಾರು ಸದ್ಭಕ್ತರು ಭಾಗವಹಿಸಲಿದ್ದಾರೆ.
ಕಳೆದ ಹಲವು ವರ್ಷಗಳಿಂದ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ನಾಲವಾರ ಶ್ರೀಗಳ ಗುರುಪೂರ್ಣಿಮೆ ಮಹೋತ್ಸವ ಕಾರ್ಯಕ್ರಮವು ಈ ಬಾರಿ ಕಲಬುರಗಿ ಮಹಾನಗರದಲ್ಲಿ ನಡೆಯುತ್ತಿರುವುದು ವಿಶೇಷ.
ಹಲವು ರಾಜಕೀಯ, ಸಾಮಾಜಿಕ ಕ್ಷೇತ್ರದ ಮುಖಂಡರು, ಕವಿ-ಕಲಾವಿದರು ಭಾಗವಹಿಸಿ ಭಕ್ತಿ ಸಮರ್ಪಣೆ ಮಾಡಿ, ಗುರುವಿಗೆ ನಮಿಸುವ ಈ ಕಾರ್ಯಕ್ರಮದಲ್ಲಿ ನಾಲವಾರ ಶ್ರೀಮಠದ ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ನಾಲವಾರ ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

