ಬಾದಾಮಿ ಸಾಹಿತ್ಯ ಸಂಭ್ರಮ | ಭೃಂಗಿಮಠ ದಂಪತಿಗಳಿಗೆ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ
ನಾಗಾವಿ ಎಕ್ಸಪ್ರೆಸ್
ಬಾದಾಮಿ: ಇತಿಹಾಸ ತಾಣ, ಚಾಲುಕ್ಯರ ನಾಡು ಬದಾಮಿಯಲ್ಲಿ ಕಪ್ಪತಗಿರಿ ಫೌಂಡೇಶನ್ ಗದಗ ಹಾಗೂ ರಾಯಚೂರು ಅವರು ಹಮ್ಮಿಕೊಂಡಿದ್ದ ಸಾಹಿತ್ಯ ಸಂಭ್ರಮ 2026 ರಲ್ಲಿ ಹೋರಾಟಗಾರ, ಸಾಹಿತಿ, ವಕೀಲರಾದ ಮಲ್ಲಿಕಾರ್ಜುನ ಭೃಂಗಿಮಠ ಹಾಗೂ ಡಾ.ರಶ್ಮಿ ಭೃಂಗಿಮಠ ದಂಪತಿ ಅವರಿಗೆ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರಶಸ್ರಿ ಸ್ವೀಕರಿಸಿ ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡುತ್ತಾ, ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂಬ ಶಿವಯೋಗಿ ಮೊದಲೂರು ದಾಸಿಮಯ್ಯನವರ ವಚನದ ಸಾರ ಇಂದಿನ ಜನಾಂಗಕ್ಕೆ ತಿಳಿಸಿಕೊಡಬೇಕಾಗಿದೆ, ಒಂದಾಗೋದು ಎಂದರೆ ಕಾಯ, ವಾಚ, ಮನಸಾ ಹಾಗೂ ಜೀವನದ ಪ್ರತಿ ಕ್ಷಣದಲ್ಲೂ ಕಷ್ಟ ಸುಖ, ವಿಚಾರ, ಆಚಾರ, ನಡೆ ನುಡಿ ಎಲ್ಲದರಲ್ಲೂ ಒಂದಾಗಿ ಒಗ್ಗಟ್ಟಿನಿಂದ ಬಾಳೋದು ಎಂದು ವ್ಯಾಖ್ಯಾನಿಸಿದರು.
ರಾಷ್ಟ್ರಕವಿ ಕುವೆಂಪು ಅವರು ಸಹ ದಾಂಪತ್ಯ ಜೀವನದ ಮಹತ್ವದ ಬಗ್ಗೆ ತಮ್ಮ ಕನಸಿನ ಕಥೆಯಲ್ಲಿ ಹೇಳಿದ್ದಾರೆ. ಗಂಡ ಹೆಂಡತಿ ಪರಸ್ಪರ ಹಜ್ಜೆ ಹೆಜ್ಜೆಗೂ ನೆನಪಿಟ್ಟು ಸಾಗಬೇಕು ಆಗಲೇ ಸ್ವರ್ಗದ ಅನುಭಾವವಾಗುತ್ತದೆ ಎಂಬುವುದು ಸಹ ಕುವೆಂಪು ಅವರ ಸಾಹಿತ್ಯದಲ್ಲಿ ನಮಗೆ ನೋಡಲು ಸಿಗುತ್ತದೆ ಎಂದು ಭೃಂಗಿಮಠ ತಿಳಿಸಿದರು.
ಇಂದಿನ ಬ್ಯೂಸಿ ಜೀವನದ ನಡುವೆ ಯುವ ಶಕ್ತಿ ಆದರ್ಶ ಬದುಕಿಗೆ ಅಗತ್ಯವಾದ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಆದರ್ಶವಾಗಿ ಬಾಳಬೇಕೆಂದು ಕರೆಕೊಟ್ಟರು.
ಸಾನಿಧ್ಯವಹಿಸಿದ್ದ ಪೂಜ್ಯ ಶಿವಪೂಜ ಶ್ರೀಗಳು ಬದಾಮಿ ಅವರು ಮಾತನಾಡಿ, ನಾಡಿನ ವಿವಿಧ ಭಾಗಗಳಿಂದ ಸಾಂಸ್ಕೃತಿಕ ನಾಡಾದ ಬದಾಮಿಗೆ ಸಾಧಕರು, ಆದರ್ಶವಾದಿಗಳು ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಉತ್ತಮ ಸಂಸ್ಕೃತಿ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಚಿನ್ನದ ಪದಕ ಫುರಸ್ಕೃತ ಪಿಎಸ್ಐ ನಾಗಪ್ಪ ಅವರು ಮಾತನಾಡಿ, ಸಾಹಿತ್ಯದ ಮೂಲಕ ನಮ್ಮ ಭಾವನೆ, ಕಲ್ಪನೆಗಳ ಮೂಲಕ ಸಮಾಜ ಸುಧಾರಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಪ್ಪತಗಿರಿ ಫೌಂಡೇಶನ್ ಆಧ್ಯಕ್ಷೆ ಚಂದ್ರಕಲಾ ಇಟಗಿಮಠ ಮಾತನಾಡಿ, ನಾಡಿನ ವಿವಿಧ ರಂಗದ ಸಾಧಕರಿಗೆ ಗುರುತಿಸುವ ಸಾಮಾಜಿಕ ಜವಾಬ್ದಾರಿ ಪ್ರತಿಯೊಂದು ಸಂಘಟನೆಗಳ ಮೇಲಿದೆ ಎಂದು ಹೇಳಿದರು. ಸಂಘಟಕ ರಮೇಶ ನಾಯಕ ರಾಯಚೂರು ಅವರು ಮಾತನಾಡಿ ಕಲೆ, ಸಾಹಿತ್ಯ ಸಾಂಸ್ಕೃತಿ ನಮ್ಮ ಜೀವಾಳವಾಗಬೇಕು ಎಂದು ತಿಳಿಸಿದರು.
ಬದಾಮಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಈ ಸಂಭ್ರಮಕ್ಕೆ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು, ಕಲಾವಿದರು, ಸಮಾಜ ಸೇವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.

