ಮಳೆಯನ್ನೂ ಲೆಕ್ಕಿಸದೆ ನೆರೆದ ಭಕ್ತಸಾಗರ, ನಾಲವಾರ ಶ್ರೀಗಳಿಗೆ ಗುರುವಂದನೆ | ಅಜ್ಞಾನದ ಕತ್ತಲು ಕಳೆದು ಜ್ಞಾನದ ಬೆಳಕು ನೀಡುವವನೇ ಸದ್ಗುರು : ಡಾ. ಸಿದ್ಧತೋಟೇಂದ್ರ ಶ್ರೀ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಗುರುಪೂರ್ಣಿಮೆಯ ಪಾವನ ದಿನದಂದು ನಗರದ ಕರುಣೇಶ್ವರ ನಗರದಲ್ಲಿರುವ ನಾಲವಾರ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಶಾಖಾಮಠದಲ್ಲಿ ಬುಧವಾರ ಭಕ್ತಿ-ಭಾವದ ಅಲೆಯೇ ಎದ್ದಿತ್ತು. ಸುರಿಯುತ್ತಿದ್ದ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ರಾಜ್ಯ ಮತ್ತು ಪರರಾಜ್ಯಗಳಿಂದ ಸಹಸ್ರಾರು ಭಕ್ತರು ಆಗಮಿಸಿ ನಾಲವಾರ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು.

ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪೂಜ್ಯ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, “ಮಾನವನ ಇಡೀ ಬದುಕನ್ನು ಆವರಿಸಿರುವ ಅಜ್ಞಾನದ ಕಠಿಣ ಕತ್ತಲೆಯನ್ನು ತೊಡೆದು, ಅಂತರಂಗದಲ್ಲಿ ಜ್ಞಾನದ ದಿವ್ಯ ಜ್ಯೋತಿಯನ್ನು ಬೆಳಗಿಸುವ ಶಕ್ತಿಯೇ ನಿಜವಾದ ಗುರು” ಎಂದು ಪ್ರತಿಪಾದಿಸಿದರು.

ಭಾರತೀಯ ಸನಾತನ ಪರಂಪರೆಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಭೌತಿಕ ಮಾಯೆ, ಆಸೆ ಮತ್ತು ಅಹಂಕಾರದ ದಾರಿಯಲ್ಲಿ ತೊಳಲಾಡುವ ಜೀವಿಗೆ ಗುರುವು ವಿವೇಕದ ಮಾರ್ಗ ತೋರಿಸುತ್ತಾನೆ. ಕೇವಲ ಅಕ್ಷರ ಜ್ಞಾನ ನೀಡುವುದು ಗುರುವಿನ ಕರ್ತವ್ಯವಲ್ಲ. ಬದುಕುವ ಸಂಸ್ಕಾರ ಕಲಿಸಿ ಆತ್ಮಸಾಕ್ಷಾತ್ಕಾರದ ಕಡೆಗೆ ಮುನ್ನಡೆಸುವುದೇ ಗುರುತ್ವದ ನಿಜವಾದ ಲಕ್ಷಣ ಎಂದು ವಿವರಿಸಿದರು.

ನಾಲವಾರ ಶ್ರೀಮಠದ ಪರಂಪರೆಯು ಶತಮಾನಗಳಿಂದಲೂ ಸಮಾಜದಲ್ಲಿ ಜ್ಞಾನ ಮತ್ತು ಕಾಯಕದ ಮೌಲ್ಯಗಳನ್ನು ಬಿತ್ತುತ್ತಾ ಬಂದಿದೆ. ಗುರುವಿನ ಚರಣಗಳಿಗೆ ಶರಣಾದಾಗ ಮಾತ್ರ ಮಾನವ ತನ್ನೊಳಗಿನ ದುರ್ಗುಣಗಳನ್ನು ತೊರೆದು ಸತ್ಪ್ರಜೆಯಾಗಲು ಸಾಧ್ಯ ಎಂದು ಅವರು ಮಾರ್ಮಿಕವಾಗಿ ನುಡಿದರು.

ಗುರುಪೂರ್ಣಿಮೆಯ ಅಂಗವಾಗಿ ಮುಂಜಾನೆಯಿಂದಲೇ ಶಾಖಾಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸದ್ಗುರುಗಳ ಭಾವಚಿತ್ರ ಹಾಗೂ ಗದ್ದುಗೆ ವಿಶೇಷ ಅಭಿಷೇಕ, ಬಿಲ್ವಾರ್ಚನೆ ಮತ್ತು ಮಹಾಮಂಗಳಾರತಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಬಳಿಕ ಪೂಜ್ಯ ಶ್ರೀಗಳ ಮಹಾಪಾದಪೂಜೆ ನಡೆಯಿತು.

ಮಳೆಯನ್ನು ಲೆಕ್ಕಿಸದೆ ಕಲಬುರಗಿ ನಗರ ಮಾತ್ರವಲ್ಲದೆ ಜಿಲ್ಲೆಯ ವಿವಿಧ ಭಾಗಗಳು ಮತ್ತು ನೆರೆಯ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಶ್ರೀಗಳ ದರ್ಶನ ಹಾಗೂ ಆಶೀರ್ವಾದ ಪಡೆಯಲು ಮಠದ ಆವರಣದಲ್ಲಿ ಭಕ್ತರ ದಂಡು ಜಮಾಯಿಸಿತ್ತು.

ಈ ಸಂದರ್ಭದಲ್ಲಿ ಶ್ರೀಮಠದ ಸದ್ಭಕ್ತರಾದ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮಹದೇವ ಗಂವಾರ, ಗುರುಬಸಪ್ಪ ಪಾಟೀಲ್ ಬಿರಾಳ, ಚನ್ನಬಸಪ್ಪ ಬಿರಾದಾರ, ಶರಣಬಸಪ್ಪ ಸಂಕಲಿ ಸೇರಿದಂತೆ ಹಲವು ಗಣ್ಯರು ಆಗಮಿಸಿ ಗುರುವಂದನೆ ಸಲ್ಲಿಸಿದರು.

ಗುರುಪೂರ್ಣಿಮೆ ಪ್ರಯುಕ್ತ ಭಕ್ತರಿಂದ ಗುರುವಿಗೆ ತುಲಾಭಾರ ಸದ್ಭಕ್ತರಾದ ಜಗದೇವಿ ಕುಮಾರಸ್ವಾಮಿ ವಿದ್ಯಾನಗರ ತಾಂಡಾ ಉದ್ನೂರ್ ವತಿಯಿಂದ ಸಮರ್ಪಣೆಯೂ ನೆರವೇರಿತು. ವಿಶೇಷ ಸಂಗೀತ ಸಿದ್ದು ಅವರಾದಿ, ಬಸವರಾಜ್ ಕಲಬುರ್ಗಿ, ಲಕ್ಷ್ಮಿಕಾಂತ್ ಹೂಗಾರ್, ಶರಣು ಬಸವ ಮಾಶಾಳ, ಹಂಪನಗೌಡ ಹಾಲ್ಗಟ್ಲಿ ಇವರಿಂದ ನೆರವೇರಿತ್ತು. ವೈದಿಕ ಸೇವೆಯನ್ನು ಶ್ರೀ ಶಿವಯ್ಯ ಶಾಸ್ತ್ರಿಗಳು ಡಿಗ್ಗಿ ಶಹಾಪುರ, ಶ್ರೀ ಜಗದೀಶ್ವರ ಶಾಸ್ತ್ರಿಗಳು ಸನ್ನತಿ ನಡೆಸಿಕೊಟ್ಟರು.

ಧಾರ್ಮಿಕ ಸಭೆಯ ನಂತರ ಆಗಮಿಸಿದ ಸರ್ವ ಭಕ್ತಾದಿಗಳಿಗೆ ಮಹಾ ದಾಸೋಹದ ವ್ಯವಸ್ಥೆಯನ್ನು ಶ್ರೀಮಠದ ಸದ್ಭಕ್ತರಾದ ಬಸವರಾಜ್ ಮುಕ್ಕಣ್ಣಿ ಕುಟುಂಬದ ವತಿಯಿಂದ ಮಾಡಲಾಗಿತ್ತು. ಕರುಣೇಶ್ವರ ನಗರದ ಶಾಖಾಮಠದ ಭಕ್ತರು ದಿನವಿಡೀ ಶ್ರದ್ಧೆಯಿಂದ ಸೇವೆ ಸಲ್ಲಿಸಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!