ಮಹಾರಾಷ್ಟ್ರದ ಉಜ್ಜನಿ, ವೀರ ಜಲಾಶಯದಿಂದ ಭೀಮಾ ನದಿಗೆ 1,43,323 ಕ್ಯುಸೆಕ್ ಪ್ರಮಾಣದ ನೀರು | ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ: ಜಿಲ್ಲಾಧಿಕಾರಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಮಹಾರಾಷ್ಟ್ರ, ರಾಜ್ಯದ ಉಜ್ಜನಿ ಜಲಾಶಯದಿಂದ 80,000 ಕ್ಯುಸೆಕ್ ಹಾಗೂ ವೀರ ಜಲಾಶಯದಿಂದ 63,323 ಕ್ಯುಸೆಕ್ ಹೀಗೆ ಒಟ್ಟು 1,43,323 ಕ್ಯುಸೆಕ್ ಪ್ರಮಾಣದ ನೀರನ್ನು ಭೀಮಾ ನದಿಗೆ ಹರಿಬಿಡಲಾಗುತ್ತಿದೆ. ಸದರಿ ನೀರು ನಾಳೆ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಗೆ ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ಸೊನ್ನ ಬ್ಯಾರೇಜ್ನಿಂದ ಸುಮಾರು 44,000 ಕ್ಯುಸೆಕ್ ಪ್ರಮಾಣದ ನೀರನ್ನು ಭೀಮಾ ನದಿಗೆ ಹರಿಬಿಡಲಾಗುತ್ತಿದೆ ಹೀಗಾಗಿ ಭೀಮಾ ನದಿ ತೀರದ ಗ್ರಾಮಗಳ ಸಾರ್ವಜನಿಕರು ಅತ್ಯಂತ ಎಚ್ಚರಿಕೆ ವಹಿಸಿ, ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆಯ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಇಕ್ರಮ್ ಷರೀಫ್ ಸೂಚಿಸಿದ್ದಾರೆ.
ಉಜ್ಜನಿ ಹಾಗೂ ವೀರ ಜಲಾಶಯಗಳಿಂದ ಬಿಡುಗಡೆಯಾಗಿರುವ ನೀರು ಸೊನ್ನ ಬ್ಯಾರೇಜ್ ಗೆ ತಲುಪಿದ ನಂತರ, ನೀರಿನ ಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ಬ್ಯಾರೇಜ್ನ ಹೆಚ್ಚಿನ ಗೇಟ್ಗಳನ್ನು ತೆರೆಯುವ ಮೂಲಕ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಭೀಮಾ ನದಿಗೆ ಹರಿಬಿಡುವ ಸಾಧ್ಯತೆ ಇದೆ. ಇದರಿಂದ ಭೀಮಾ ನದಿಯ ನೀರಿನ ಮಟ್ಟವು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇರುವುದರಿಂದ, ಅಫಜಲಪುರ, ಜೇವರ್ಗಿ, ಶಹಾಬಾದ, ಕಲಬುರಗಿ ಹಾಗೂ ಚಿತ್ತಾಪುರ ತಾಲೂಕುಗಳ ಭೀಮಾ ನದಿ ತೀರದ ಗ್ರಾಮಗಳ ಸಾರ್ವಜನಿಕರು ಅತ್ಯಂತ ಎಚ್ಚರಿಕೆ ವಹಿಸಿ, ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕೆಳಕಂಡ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೋರಿದ್ದಾರೆ.
ಯಾವುದೇ ಕಾರಣಕ್ಕೂ ಭೀಮಾ ನದಿ ಹಾಗೂ ಅದರ ಉಪನದಿಗಳ ಬಳಿ ಹೋಗಬಾರದು, ಜಾನುವಾರುಗಳನ್ನು ನದಿ ತೀರದಲ್ಲಿ ಮೇಯಿಸಲು ಅಥವಾ ನೀರು ಕುಡಿಸಲು ಕರೆದೊಯ್ಯಬಾರದು, ಮಕ್ಕಳು ನದಿ ತೀರದ ಪ್ರದೇಶಗಳಿಗೆ ಹೋಗದಂತೆ ಪೋಷಕರು ವಿಶೇಷ ನಿಗಾ ವಹಿಸಬೇಕು, ನದಿ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಸ್ಥಳೀಯ ಆಡಳಿತದಿಂದ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಮೀನುಗಾರರು ಭೀಮಾ ನದಿಯಲ್ಲಿ ಮೀನುಗಾರಿಕೆ ಸೇರಿದಂತೆ ಯಾವುದೇ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳಬಾರದು, ಯಾವುದೇ ತುರ್ತು ಪರಿಸ್ಥಿತಿ ಉಂಟಾದಲ್ಲಿ ಕೂಡಲೇ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಥವಾ ತಾಲೂಕು ಆಡಳಿತವನ್ನು ಸಂಪರ್ಕಿಸಬೇಕು, ಸಾರ್ವಜನಿಕರು ನದಿ ದಡದಲ್ಲಿ ಅನಗತ್ಯವಾಗಿ ಸಂಚರಿಸುವುದು, ನದಿಯೊಳಗೆ ಇಳಿಯುವುದು, ನದಿಯನ್ನು ದಾಟಲು ಪ್ರಯತ್ನಿಸುವುದು ಹಾಗೂ ನದಿ ತೀರದಲ್ಲಿ ಅಥವಾ ನದಿಯ ಸಮೀಪ ಸೆಲ್ಸಿ (Selfie) ತೆಗೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

