ಚಿತ್ತಾಪುರ ಎಸ್ಐಆರ್ ಶೇ.96.65 ಗುರಿ ಸಾಧನೆ | ಎಸ್ಐಆರ್ ಯಶಸ್ವಿಗೆ ಸಾರ್ವಜನಿಕರು ಸಹಕರಿಸಿ: ಹಿರೇಮಠ ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಚುನಾವಣಾ ಆಯೋಗದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಯಶಸ್ವಿಗೆ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಮಾಹಿತಿ ನೀಡಿ ಸಾರ್ವಜನಿಕರು ಸಹಕರಿಸಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಕರೆ ನೀಡಿದರು.
ಪಟ್ಟಣದ ಪ್ರಜಾ ಸೌಧದ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊನೆ ದಿನಾಂಕದವರೆಗೆ ಕಾಯದೇ ಬೇಗನೆ ಗಣತಿ ನಮೂನೆ ಭರ್ತಿ ಮಾಡಿ ಬಿಎಲ್ಓ ಗಳಿಗೆ ಹಿಂದುರುಗಿಸಿ ಎಸ್ಐಆರ್ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಎಸ್ಐಆರ್ ಶೇ.96.65 ಗುರಿ ಸಾಧನೆ: ವಿಧಾನಸಭಾ ಕ್ಷೇತ್ರದ ಒಟ್ಟು 257 ಮತಗಟ್ಟೆಗಳಿದ್ದು ಒಟ್ಟು 251226 ಮತದಾರರು ಇದ್ದು ಎಲ್ಲರಿಗೂ ಗಣತಿ ನಮೂನೆ ವಿತರಣೆ ಮಾಡಲಾಗಿದೆ. ಈ ಪೈಕಿ 193767 ಮತದಾರರು ಭರ್ತಿ ಮಾಡಿ ಹಿಂದುರುಗಿಸಿದ್ದಾರೆ, ASDD Absent 3764, Shifted 32273, Dead 8056, Duplicate 4812, others 139 (ಗೈರುಹಾಜರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಮತದಾರರು) ಒಟ್ಟು 49044 ಮತದಾರರು, ಗಣತಿ ನಮೂನೆ ಡಿಜಿಟೈಜಡ್ ಮಾಡಿದ್ದು ಮತ್ತು ಎಎಸ್’ಡಿಡಿ ಸೇರಿ ಒಟ್ಟು 242811 ಮತದಾರರ ಮಾಹಿತಿ ಸಂಗ್ರಹಿಸಿದ್ದು ಶೇ.96.65 ಪ್ರತಿಶತ ಗುರಿ ಸಾಧಿಸಲಾಗಿದೆ ಇನ್ನೂ ಉಳಿದಂತೆ 8415 ಮತದಾರರು ಬಾಕಿ ಉಳಿದಿದ್ದು ಸಂಪರ್ಕ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.
ಆಗಸ್ಟ್ 1 ರಿಂದ 5 ರವರೆಗೆ ಗ್ರಾಮ ಸಭೆ, ವಾರ್ಡ್ ಸಭೆ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ಚಿತ್ತಾಪುರ ಮತ್ತು ವಾಡಿ ಪುರಸಭೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಎಸ್‌ಐಆರ್ ಎಎಸ್’ಡಿಡಿ-2026 ಕುರಿತು ಆಗಸ್ಟ್ 1 ರಿಂದ 5 ರ ವರೆಗೆ ನಿಗದಿಪಡಿಸಿದ ಗ್ರಾಮಗಳಲ್ಲಿ ಹಾಗೂ ಪಟ್ಟಣದ ಏರಿಯಾಗಳಲ್ಲಿ ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳನ್ನು ಆಯೋಜಿಸಲಾಗಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.
ಪ್ರಜಾ ಸೌಧದಲ್ಲಿ ವಾರ್ ರೂಮ್ ಸ್ಥಾಪನೆ: ಎಸ್ಐಆರ್ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಯಾವುದೇ ಸಂಶಯ ಗೊಂದಲಗಳ ನಿವಾರಣೆಗೆ ಪ್ರಜಾ ಸೌಧದಲ್ಲಿ ವಾರ್ ರೂಮ್ ಸ್ಥಾಪನೆ ಮಾಡಲಾಗಿದೆ ಇಲ್ಲಿ 9 ಜನ ತಹಸೀಲ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ASDD ಪಟ್ಟಿ: ಸಮೀಕ್ಷೆಯ ಸಮಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿದಾಗ ಸಿಗದ, ಊರು ಬಿಟ್ಟು ಹೋದ, ಮರಣ ಹೊಂದಿದ ಅಥವಾ ಒಂದಕ್ಕಿಂತ ಹೆಚ್ಚು ಕಡೆ ಹೆಸರಿರುವ ಮತದಾರರನ್ನು ಗುರುತಿಸಿ ಈ ನಿರ್ದಿಷ್ಟ ವರ್ಗದ ಅಡಿಯಲ್ಲಿ ದಾಖಲಿಸುತ್ತಾರೆ ಎಂದು ತಿಳಿಸಿದರು.
ತಿದ್ದುಪಡಿಗೆ ಅವಕಾಶ: ಎಸ್ಐಆರ್ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಈಗಾಗಲೇ ಮತದಾರರು ನೀಡಿದ ಮಾಹಿತಿಯಲ್ಲಿ ಏನಾದರೂ ತಿದ್ದುಪಡಿ ಇದ್ದರೆ ಅದಕ್ಕೆ ಅವಕಾಶ ಇದೆ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಆಗಸ್ಟ್ 8 ಕೊನೆ ದಿನ: ಮತದಾರರ ವಿಶೇಷ ಪರಿಷ್ಕರಣೆ (SIR) ನೀಡಿದ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸಲು ಬಿಎಲ್‌ಒ (BLO) ಗಳಿಗೆ ಸಲ್ಲಿಸಲು ಆಗಸ್ಟ್ 8 ಕೊನೆಯ ದಿನವಾಗಿದ್ದು, ರಾತ್ರಿ 11.59 ಸಮಯದವರೆಗೆ ಅವಕಾಶ ಇದೆ, ಅಲ್ಲಿಂದ ಆಪ್ ಕ್ಲೋಸ್ ಆಗಲಿದೆ ಎಂದು ತಿಳಿಸಿದರು.
ಪರಿಷ್ಕೃತ ಎಸ್‌ಐಆರ್ ವೇಳಾಪಟ್ಟಿ: ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ ಜೂನ್ 30 ರಿಂದ ಆಗಸ್ಟ್ 8, ಮತಗಟ್ಟೆಗಳ ತಾರ್ಕಿಕ ಮರು ಹೊಂದಾಣಿಕೆ ಆಗಸ್ಟ್ 8, ಕರಡು ಮತದಾರರ ಪಟ್ಟಿ ಪ್ರಕಟಣೆ ಆಗಸ್ಟ್ 17, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ ಆಗಸ್ಟ್ 17 ರಿಂದ ಸೆಪ್ಟೆಂಬರ್ 16, ನೋಟಿಸ್ ಹಂತ ಹಾಗೂ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಯ ಹಂತ ಆಗಸ್ಟ್ 17 ರಿಂದ ಅಕ್ಟೋಬರ್ 15, ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಅಕ್ಟೋಬರ್ 19.
“ಅರ್ಹ ಮತದಾರರ ಹೆಸರುಗಳು ಬಿಟ್ಟುಹೋಗದಂತೆ ಮತ್ತು ಅನರ್ಹ ಅಥವಾ ನಕಲಿ ಹೆಸರುಗಳು ಪಟ್ಟಿಯಲ್ಲಿ ಉಳಿಯದಂತೆ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಣೆ ಮಾಡುವುದೇ SIR (Special Intensive Revision ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ) ಉದ್ದೇಶ. ಹೀಗಾಗಿ ಇದೊಂದು ಜವಾಬ್ದಾರಿ ಎಂದು ತಿಳಿದು ತಡಮಾಡದೇ ಗಣತಿ ನಮೂನೆ ಭರ್ತಿ ಮಾಡಿ ಬಿಎಲ್ಓಗಳಿಗೆ ಕೊಡಿ “.-ರಾಜಕುಮಾರ್ ರಾಠೋಡ ಮತದಾರರ ನೋಂದಣಾಧಿಕಾರಿ ಚಿತ್ತಾಪುರ ಕ್ಷೇತ್ರ.

