Oplus_0

ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ | ಸುಸ್ಥಿರ ಅಭಿವೃದ್ಧಿಗೆ ಕೃತಕ ಬುದ್ಧಿಮತ್ತೆ ಶಕ್ತಿವರ್ಧಕವಾಗಬೇಕು: ಸಚಿವ ಪ್ರಿಯಾಂಕ್ ಖರ್ಗೆ

ನಾಗಾವಿ ಎಕ್ಸಪ್ರೆಸ್

ಬೆಂಗಳೂರು: ಸುಸ್ಥಿರ ಅಭಿವೃದ್ಧಿ ಗುರಿಗಳ (Sustainable Development Goals – SDGs) ಸಾಧನೆಗೆ ಕೃತಕ ಬುದ್ಧಿಮತ್ತೆ (Artificial Intelligence – AI) ಶಕ್ತಿವರ್ಧಕವಾಗಿ ಕಾರ್ಯನಿರ್ವಹಿಸಬೇಕು ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರುನಲ್ಲಿರುವ ವೋಲ್ವರ್‌ಹ್ಯಾಂಪ್ಟನ್–ಬೆಂಗಳೂರು ಸೆಂಟರ್ ಫಾರ್ ರಿಸರ್ಚ್ ಅಂಡ್ ಇನೋವೇಷನ್ (1WBCR&I) ವತಿಯಿಂದ ಆಯೋಜಿಸಿದ್ದ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಬಳಕೆ” (Leveraging Artificial Intelligence to Advance Sustainable Development Goals) ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ, ಸಂಶೋಧಕರು, ಶಿಕ್ಷಣ ತಜ್ಞರು, ಕೈಗಾರಿಕಾ ವಲಯದ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವ ಮೂಲಕ ಸಮಾಜಮುಖಿ ಅಭಿವೃದ್ಧಿಗೆ ವೇಗ ನೀಡಬೇಕು ಹಾಗೂ ಮುಂದಿನ ತಲೆಮಾರಿನ ನವೋದ್ಯಮಿಗಳನ್ನು ರೂಪಿಸಬೇಕೆಂದು ಕರೆ ನೀಡಿದರು.

ಸಂಯುಕ್ತ ರಾಷ್ಟ್ರಗಳ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಉಲ್ಲೇಖಿಸಿದ ಅವರು, ಬಡತನ ನಿರ್ಮೂಲನೆ, ಉತ್ತಮ ಆರೋಗ್ಯ ಸೇವೆ, ಗುಣಮಟ್ಟದ ಶಿಕ್ಷಣ, ಅಸಮಾನತೆ ನಿವಾರಣೆ ಹಾಗೂ ಹವಾಮಾನ ಬದಲಾವಣೆಯಂತಹ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಇನ್ನೂ ಸಾಕಷ್ಟು ಅಂತರವಿದೆ. ಈ ಅಂತರವನ್ನು ಕಡಿಮೆ ಮಾಡುವಲ್ಲಿ ಕೃತಕ ಬುದ್ಧಿಮತ್ತೆ ಅಪೂರ್ವ ಅವಕಾಶವನ್ನು ಒದಗಿಸುತ್ತಿದ್ದು, ಅದನ್ನು ಮಾನವ ಕಲ್ಯಾಣದ ದೃಷ್ಟಿಯಿಂದ ಜವಾಬ್ದಾರಿಯುತವಾಗಿ ಬಳಸಬೇಕಾಗಿದೆ ಎಂದು ಹೇಳಿದರು.

ಕೃತಕ ಬುದ್ಧಿಮತ್ತೆ ಯಾವುದೇ ರಕ್ಷಕನಲ್ಲ. ಅದಕ್ಕೆ ಆತ್ಮಸಾಕ್ಷಿ, ಧೈರ್ಯ ಅಥವಾ ಕರುಣೆ ಇಲ್ಲ. ಆದರೆ ಆತ್ಮಸಾಕ್ಷಿ, ಧೈರ್ಯ ಮತ್ತು ಕರುಣೆ ಹೊಂದಿರುವ ಮನುಷ್ಯನ ಕೈಯಲ್ಲಿ ಅದು ಅತ್ಯಂತ ಶಕ್ತಿಯುತ ಸಾಧನವಾಗುತ್ತದೆ. ಎಐ ನಮ್ಮ ಸಮಸ್ಯೆಗಳನ್ನು ಪರಿಹರಿಸಬಹುದೇ ಎಂಬುದಕ್ಕಿಂತ, ಸಮಾಜಕ್ಕೆ ಅತ್ಯಂತ ಅಗತ್ಯವಿರುವ ಸಮಸ್ಯೆಗಳ ಪರಿಹಾರಕ್ಕಾಗಿ ನಾವು ಅದನ್ನು ಎಷ್ಟು ಜವಾಬ್ದಾರಿಯಿಂದ ಬಳಸುತ್ತೇವೆ ಎಂಬುದೇ ಮುಖ್ಯ ಎಂದು ಸಚಿವರು ಹೇಳಿದರು.

“ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯತ್ತ ಸಾಗುವ ಸಂದರ್ಭದಲ್ಲಿ ತಂತ್ರಜ್ಞಾನ ಸದಾ ಮಾನವ ಕೇಂದ್ರಿತವಾಗಿರಬೇಕು. ವೈದ್ಯರಿಗೆ ಜೀವ ಉಳಿಸಲು, ರೈತರಿಗೆ ಉತ್ಪಾದಕತೆ ಹೆಚ್ಚಿಸಲು, ಸರ್ಕಾರಗಳಿಗೆ ನಾಗರಿಕ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡಲು ಹಾಗೂ ಯುವ ನವೋದ್ಯಮಿಗಳಿಗೆ ಸಮಾಜಮುಖಿ ಪರಿಹಾರಗಳನ್ನು ರೂಪಿಸಲು ಎಐ ನೆರವಾಗಬೇಕು. ಇದೇ ನಮ್ಮ ಭವಿಷ್ಯದ ದಿಕ್ಕಾಗಬೇಕು ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.

ಭಾಷಣದ ಸಮಾರೋಪದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ನವೋದ್ಯಮಿಗಳು ತಂತ್ರಜ್ಞಾನ ಅಭಿವೃದ್ಧಿಯ ಕೇಂದ್ರಬಿಂದುವಾಗಿ ಮಾನವನನ್ನು ಪರಿಗಣಿಸಬೇಕು ಎಂದು ಕರೆ ನೀಡಿದರು. ಕೃತಕ ಬುದ್ಧಿಮತ್ತೆಯನ್ನು ಕೇವಲ ತಾಂತ್ರಿಕ ಸಾಧನವಾಗಿ ಮಾತ್ರವಲ್ಲದೆ, ಸಮಾನತೆ, ಒಳಗೊಳ್ಳುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಸಾಧನವಾಗಿ ಬಳಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರ ದೇಶದ ಮೊದಲ ವಿಶೇಷ ಎಐ ವಿಶ್ವವಿದ್ಯಾಲಯ, ವಿಶ್ವದ ಅತ್ಯಂತ ಕೈಗೆಟಕುವ ಎಐ ಸಿದ್ಧ ವೈಯಕ್ತಿಕ ಕಂಪ್ಯೂಟರ್ (AI-ready Personal Computer) ಅಭಿವೃದ್ಧಿ, ELEVATE Next ಮೂಲಕ ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ, ನಿಪುಣ ಕರ್ನಾಟಕ (Nipuna Karnataka), ಜಾಗತಿಕ ನಾವೀನ್ಯತಾ ಸಹಭಾಗಿತ್ವಗಳು ಹಾಗೂ ಎಐ ಆಧಾರಿತ ಇ-ಆಡಳಿತ ಕಾರ್ಯಕ್ರಮಗಳ ಮೂಲಕ ಜವಾಬ್ದಾರಿಯುತ ಹಾಗೂ ಭವಿಷ್ಯೋನ್ಮುಖ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಬದ್ಧತೆಯನ್ನು ಮುಂದುವರಿಸಿದೆ ಎಂದು ಸಚಿವರು ವಿವರಿಸಿದರು.

ವಿಶ್ವವಿದ್ಯಾಲಯಗಳು ಮೂಲಸೌಕರ್ಯಕ್ಕಿಂತ ಸಂಶೋಧನೆ, ನಾವೀನ್ಯತೆ, ಉದ್ಯಮಶೀಲತೆ ಮತ್ತು ಉದ್ಯೋಗಾರ್ಹತೆಗೆ ಆದ್ಯತೆ ನೀಡುವ ಮೂಲಕ ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಯುವ ನವೋದ್ಯಮಿಗಳನ್ನು ರೂಪಿಸಬೇಕೆಂದರು. ಶಿಕ್ಷಣ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಎಐ ಬಳಕೆಯಿಂದ ಕಲಿಕೆ ಹಾಗೂ ನಾಗರಿಕ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಬಹುದಾಗಿದ್ದು, ಸರ್ಕಾರಗಳು ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧಕರಿಗೆ ಮೊದಲ ಗ್ರಾಹಕರಾಗಿ ಬೆಂಬಲ ನೀಡುವ ಮೂಲಕ ಸಮಾಜಮುಖಿ ಎಐ ಪರಿಹಾರಗಳ ಅಭಿವೃದ್ಧಿಗೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು. ಕರ್ನಾಟಕ ಸರ್ಕಾರ ಡೀಪ್-ಟೆಕ್, ಸ್ಟಾರ್ಟ್‌ಅಪ್ ಬೆಂಬಲ, ಕೌಶಲ್ಯಾಭಿವೃದ್ಧಿ ಹಾಗೂ ಜಾಗತಿಕ ಸಹಭಾಗಿತ್ವಗಳ ಮೂಲಕ ಎಐ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದು, ಬೆಂಗಳೂರು ವಿಶ್ವದ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಕೇಂದ್ರ ಹಾಗೂ ಎಐ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲದಲ್ಲಿ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿರುವುದು ರಾಜ್ಯದ ತಾಂತ್ರಿಕ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಡಾ.ಮನಮೋಹನ್‌ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ರಮೇಶ್‌ ಬಿ ಅಧ್ಯಕ್ಷತೆವಹಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು, ಶಿಕ್ಷಣ ತಜ್ಞರು ಪಾಲ್ಗೊಂಡಿದ್ದರು.

“ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಕೃತಕ ಬುದ್ಧಿಮತ್ತೆ (ಎಐ) ಶಕ್ತಿವರ್ಧಕವಾಗಿ ಕಾರ್ಯನಿರ್ವಹಿಸಬೇಕಿದ್ದು, ವಿದ್ಯಾರ್ಥಿಗಳು ಎಐ ಕೌಶಲ್ಯಗಳ ಜೊತೆಗೆ ಮೂಲಭೂತ ಜ್ಞಾನ, ವೈಜ್ಞಾನಿಕ ಮನೋಭಾವ ಹಾಗೂ ವಿಮರ್ಶಾತ್ಮಕ ಚಿಂತನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು”.-ಪ್ರಿಯಾಂಕ್ ಖರ್ಗೆ ಗೃಹ ಸಚಿವರು.

Spread the love

Leave a Reply

Your email address will not be published. Required fields are marked *

error: Content is protected !!