ಪ್ರಿಯಾಂಕ್ ಖರ್ಗೆ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳಲು ಕಲಬುರಗಿ ಜನರಿಗೆ ದುಡ್ಡುಕೊಟ್ಟು ಪ್ರತಿಭಟನೆ ಮಾಡಿಸಿದ್ದಾರೆ: ಬೆಣ್ಣೂರಕರ್ ಗಂಭೀರ ಆರೋಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಕೆಲವೇ ದಿನಗಳಲ್ಲಿ ಸಚಿವ ಸಂಪುಟ ಮರು ವಿಂಗಡಣೆ ಆಗಲಿದೆ. ಅದರಲ್ಲಿ ತಮ್ಮ ಖುರ್ಚಿಗೆ ದಕ್ಕೆ ಬರುವುದು ಖಚಿತವಾಗಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನದ ಉಳಿಸಿಕೊಳ್ಳಲು ಕಲಬುರಗಿ ಜನರಿಗೆ ದುಡ್ಡುಕೊಟ್ಟು ಪ್ರತಿಭಟನೆ ಮಾಡಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಗಂಭೀರವಾಗಿ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೇ.31 ರಂದು ಕಲಬುರಗಿ ನಗರದಲ್ಲಿ ನಾಗರಿಕ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಗೆ ಜನರನ್ನು ಕರೆತರಲು ಪ್ರತಿ ವಾಹನಕ್ಕೆ 5 ರಿಂದ 6 ಸಾವಿರ ಕೊಟ್ಟಿದ್ದಾರೆಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಜನರೇ ಹೇಳಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ 8 ಲಕ್ಷ ದಲಿತರಿದ್ದಾರೆ ಆದರೆ ಪ್ರತಿಭಟನೆಗೆ ಬಂದಿದ್ದು ಕೇವಲ 1000 ರಿಂದ 1500 ಜನರು. ನಾಗರಿಕ ಹೋರಾಟ ಸಮಿತಿಯ ಹೆಸರಿನಲ್ಲಿ ಬರೀ ಕಾಂಗ್ರೆಸ್ ದಲಿತರು ಮಾತ್ರ ಭಾಗವಹಿಸಿದ್ದಾರೆ ಎಂದು ಟೀಕಿಸಿದರು.
ಕಲಬುರಗಿ ಜಿಲ್ಲೆಯ ದಲಿತರಿಗೆ, ಹಿಂದುಳಿದವರಿಗೆ ಮತ್ತು ಮುಸ್ಲಿಂ ಜನರಿಗೆ ಸಚಿವರು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಛಲವಾದಿ ನಾರಾಯಣ ಸ್ವಾಮಿ ಅವರು ತಮಗೆ ನಾಯಿ ಅಂತ ನಿಂದಿಸಿದ್ದಾರೆ ಅನ್ನುವುದು ನೆಪಾ ಮಾತ್ರ, ಇಲ್ಲಿವರಿಗೆ ತಮಗೂ ವಿಧಾನಸಭೆಯ ಒಳಗೆ ಮತ್ತು ಹೊರಗೆ ಸುಮಾರು ಜನರು ಟೀಕೆ ಟಿಪ್ಪಣೆ ಮಾಡಿದ್ದಾರೆ ಯಾರ ವಿರುದ್ಧವೂ ಪ್ರತಿಭಟನೆ ಮಾಡಿಸಿಲ್ಲ. ಆದರೆ ಈಗ ತಮ್ಮ ಸಚಿವ ಸ್ಥಾನ ಮುಂದುವರೆಸಿಕೊಳ್ಳಲು ಪ್ರತಿಭಟನೆ ಮಾಡಿಸಿದ್ದಾರೆ. ಕಲ್ಯಾಣ ಕರ್ನಾಟಕದ ಏಕೈಕ ದಲಿತ ಮಂತ್ರಿ ನಾನೆ ಎಂದು ತೋರಿಸಲು ಶಕ್ತಿ ಪ್ರದರ್ಶನ ಇದಾಗಿತ್ತು ಎಂದು ಹೇಳಿದರು.
ತಮ್ಮ ವಿರುದ್ಧ ಛಲವಾದಿ ನಾರಾಯಣ ಸ್ವಾಮಿ ಅವರು ಸರಕಾರದಿಂದ ಅನಧಿಕೃತವಾಗಿ 5 ಎಕರೆ ಜಮೀನು ಪಡೆದಿದ್ದು ಅಂತ ಆರೋಪ ಮಾಡಿದರು. ತಾವು ಸರಕಾರದಿಂದ ಪಡೆದಿರುವ ಜಮೀನು ಬಡ ದಲಿತರಿಗೆ ಕೈಗಾರಿಕೆ ಮಾಡಲು ನೀಡಬೇಕಾಗಿತ್ತು ಅದನ್ನು ತಾವು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ತಮ್ಮ ಸಂಸ್ಥೆಗೆ ಪಡೆದಿರುವಿರಿ ಅಂತ ಆರೋಪ ಮಾಡಿದ್ದರು. ಆಗ ನಾರಾಯಣಸ್ವಾಮಿ ಅವರ ವಿರುದ್ಧ ಪ್ರತಿಭಟನೆ ಮಾಡಬೇಕಾಗಿತ್ತು ಆದರೆ ತಾವು ಆಗ ಮಾಡಲಿಲ್ಲ. ಬಂದ ದಾರಿಗೆ ಸುಂಕ ಇಲ್ಲ ಅಂತ ತಿಳಿದು ಇದರಿಂದ ತಮ್ಮ ಮಂತ್ರಿಗಿರಿಗೆ ಕುತ್ತು ಬರುತ್ತದೆ ಅಂತ ಅದನ್ನು ಸರಕಾರಕ್ಕೆ ಮರಳಿ ಹಿಂದಿರುಗಿಸಿದ್ದಿರಿ. ಇದು ಇಡಿ ಕರ್ನಾಟಕದ ಜನರು ಮರೆತ್ತಿಲ್ಲಾ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪುರಸಭೆ ಸದಸ್ಯರಾದ ರಮೇಶ್ ಬೊಮ್ಮನಳ್ಳಿ, ಶಾಮಣ್ಣ ಮೇಧಾ, ಮುಖಂಡರಾದ ಶಾಂತಕುಮಾರ್ ಮಳಖೇಡ, ಆನಂದ ಇಂಗಳಗಿ, ಚಂದ್ರು ಕಾಳಗಿ, ಶಿವರಾಮ ಚವ್ಹಾಣ, ರಾಜು ದೊರೆ ಇದ್ದರು.

