ಅಕ್ಷರಾಭ್ಯಾಸ ಕಾರ್ಯಕ್ರಮ, ವಿದ್ಯಾನಿಕೇತನ ಶಾಲೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ: ರಾವೂರ ಶ್ರೀಗಳು 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಸಂಚಾಲಿತ ವಿದ್ಯಾನಿಕೇತನ ಶಾಲೆಯು ಜಿಲ್ಲೆಯಲ್ಲಿಯೇ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ರಾವೂರಿನ ಶ್ರೀ ಸಿದ್ದಲಿಂಗೇಶ್ವರ ಮಹಾ ಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ನುಡಿದರು.

ಪಟ್ಟಣದ ಚಿತ್ತಷಾವಲಿ ದರ್ಗಾ ರಸ್ತೆಯಲ್ಲಿ ಇರುವ ವಿದ್ಯಾನಿಕೇತನ ಪೂರ್ವ-ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಪಾಲಕರು ಮಕ್ಕಳಿಗಾಗಿ ಸಮಯ ತೆಗೆದು ಅವರ ಅಭ್ಯಾಸದ ಬಗ್ಗೆ ಗಮನ ಹರಿಸಬೇಕು. ಕೇವಲ ಹಣ ಖರ್ಚು ಮಾಡಿ, ಮಕ್ಕಳು ಹೆಚ್ಚಿನ ಅಂಕ ತರಲಿ ಎಂದು ಸುಮ್ಮನೆ ಕುಳಿತರೆ ಅದು ನಿಮ್ಮ ಜವಾಬ್ದಾರಿಯಲ್ಲ. ಹಾಗೆಯೇ ಮಕ್ಕಳಿಗೆ ಅನಗತ್ಯ ಒತ್ತಡವನ್ನು ಹೇರಬಾರದು ಎಂದು ಸಲಹೆ ನೀಡಿದರು. ಮಕ್ಕಳಿಗೆ ಅಕ್ಷರ ಜ್ಞಾನ ನೀಡುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಲು ಇಬ್ಬರ ಸಹಯೋಗ ಅನಿವಾರ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ನರ್ಸರಿ, ಎಲ್‌ಕೆಜಿ, ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡುವ ಶುಭ ಕಾರ್ಯಕ್ಕೆ ಮುನ್ನ ಪೂಜ್ಯ ಶ್ರೀಗಳು ಪಾದಪೂಜೆ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಪೇಂದು, ಉಪಾಧ್ಯಕ್ಷರಾದ ರಾಜಶೇಖರ ಬಳ್ಳಾ, ರಮೇಶ ಭಕ್ತಿ, ಶಾಲೆಯ ಮುಖ್ಯಗುರು ಸಂತೋಷಕುಮಾರ ಮತ್ತು ಶಿಕ್ಷಕರು, ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!