ಮಾಲಗತ್ತಿಯನ್ನು ಸಾರಾಯಿ ಮಾರಾಟ ಮುಕ್ತ ಗ್ರಾಮವನ್ನಾಗಿ ಮಾಡಿದ ಅಧಿಕಾರಿಗಳಿಗೆ ಸನ್ಮಾನ | ಗ್ರಾಮಾಭಿವೃದ್ದಿಗೆ ಎಲ್ಲರೂ ಕೈಜೋಡಿಸಿ: ತಹಸೀಲ್ದಾರ್
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಮಹಿಳೆಯರು, ಯುವಕರು ಸೇರಿ ಮಾಲಗತ್ತಿಯನ್ನು ಸಾರಾಯಿ ಮಾರಾಟ ಮುಕ್ತ ಗ್ರಾಮವನ್ನಾಗಿ ಮಾಡಿದ್ದಾರೆ ಹೀಗಾಗಿ ಗ್ರಾಮಾಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಜಗದೀಶ ಚೌರ ಹೇಳಿದರು.
ತಾಲೂಕಿನ ಮಾಲಗತ್ತಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾರಾಯಿ ಮಾರಾಟ ಮುಕ್ತ ಗ್ರಾಮವನ್ನಾಗಿ ಮಾಡಿರುವ ಕಾರ್ಯ ಇನ್ನೊಬ್ಬರಿಗೂ ಮಾದರಿಯಾಗಿದೆ. ಎಲ್ಲರೂ ಸಹಕಾರ ನೀಡಿದರೆ ಈ ಹಳ್ಳಿಯನ್ನು ರಾಜ್ಯಕ್ಕೆ ಮಾದರಿಯಾಗಿಸುವೆ ಎಂದರು.
ಸಾರಾಯಿ ಕುಡಿಯುವುದರಿಂದ ಆರೋಗ್ಯ ಹಾಳಾಗುವುದಲ್ಲದೆ, ಕುಟುಂಬದ ನೆಮ್ಮದಿ ದೂರುವಾಗುತ್ತದೆ. ಮಹಿಳೆಯರು ಮಕ್ಕಳ ಮೇಲೆ ನಿಗಾ ಇಡಬೇಕು. ಕೂಲಿ ಮಾಡಿ ಬಂದ ಹಣವನ್ನು ಕುಡಿತಕ್ಕೆ ಹಾಕುವ ಮೂಲಕ ಕುಟುಂಬವನ್ನು ಬೀದಿಗೆ ತರುವುದು ಸರಿಯಲ್ಲ ಎಂದು ಹೇಳಿದರು.
ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಹಾಗೂ ಯುವಕರು ಮುಂದೆ ಬರಬೇಕು. ನಿಮಗೆ ಬೇಕಾದ ಸಹಕಾರ ನೀಡಲು ತಾಲೂಕು ಆಡಳಿತ ಸಿದ್ಧವಿದೆ ಎಂದು ಹೇಳಿದರು.
ಅಬಕಾರಿ ಸಿಪಿಐ ವನೀತಾ ಸೀತಾಳೆ ಮಾತನಾಡಿದರು. ಸಾರಾಯಿ ಮಾರಾಟ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಹಕರಿಸಿದ ತಹಸೀಲ್ದಾರ್ ಜಗದೀಶ ಚೌರ ಮತ್ತು ಅಬಕಾರಿ ಸಿಪಿಐ ವನಿತಾ ಸೀತಾಳೆ ಅವರಿಗೆ ದೇವಸ್ಥಾನದ ಪೀಠಾಧಿಪತಿ ಶ್ರೀ ಚನ್ನಬಸವ ಶರಣರು ಸನ್ಮಾನಿಸಿ ಗೌರವಿಸಿದರು.
ಡಾ.ಸಿರಿಸ್, ಈಶ್ವರ ಮುಗುಳನಾಗಾಂವ್, ಮಲ್ಲಿಕಾರ್ಜುನ ಇಟಗಿ, ಅಬಕಾರಿ ಪಿಎಸ್‌ಐ ಮಹೇಶಕುಮಾರ ಹಿರೇಮಠ, ಪ್ರಮುಖರಾದ ಮಹ್ಮದ್ ಆರೀಫ್, ಮಲ್ಲಣ್ಣ ಸಣಮೋ, ಬಾಲಕೃಷ್ಣ ಜೋಶಿ, ನಿಂಗಪ್ಪ ಆಯಿ, ಮಲ್ಲಿಕಾರ್ಜುನ ಕುಲಕುಂದಿ, ಧರ್ಮರಾಜ ಸಣಮೋ, ಶಿವಾನಂದ ಅಲ್ಲೂರ, ಶರಣಪ್ಪ ಸಣಮೋ, ಮರೆಣ್ಣ ಮೂಲಿಮನಿ, ಚಂದ್ರಶೇಖರ ರಾವೂರಕರ್, ಬಸವರಾಜ ಹಲ್ಲಿನ, ವಿಜಯಕುಮಾರ ಕಟ್ಟಿ, ರಾಜೇಂದ್ರ ತಳವಾರ, ಶಿವಲಿಂಗ ವಾಲೀಕಾರ, ಕಾಶೀನಾಥ್ ಸಣಮೋ, ಸಿದ್ದಪ್ಪ ಅಲ್ಲೂರ, ರಮೇಶ ತಳವಾರ, ಬಸಲಿಂಗ ಕಟ್ಟಿ ಇತರರಿದ್ದರು. ಮಲ್ಲಿಕಾರ್ಜುನ ಸ್ವಾಗತಿಸಿದರು, ಈಶ್ವರ ನಿರೂಪಣೆ ಮಾಡಿದರು, ಕೆ.ರಮೇಶ ಭಟ್ ವಂದಿಸಿದರು.

