Oplus_0

ಮಳೆಗಾಲದ ಅಧಿವೇಶನದ ಮೊದಲ ದಿನವೇ ಮಾದಿಗರಿಗೆ ಪ್ರತ್ಯೇಕ ಶೇ.6 ಮೀಸಲಾತಿ ಘೋಷಣೆಗೆ ಮುಖಂಡರ ಆಗ್ರಹ 

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ವಿಳಂಬಕ್ಕೆ ಅವಕಾಶ ನೀಡದೇ ಮಳೆಗಾಲ ಅಧಿವೇಶನದ ಮೊದಲ ದಿನದಂದು ಮಾದಿಗರಿಗೆ ಶೇ 6 ರ ಮೀಸಲಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದ ಸದಸ್ಯರು ಘೋಷಣೆ ಮಾಡಬೇಕೆಂದು ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಮಾದಿಗ ಸಮಾಜದ ಮುಖಂಡ ದೇವೀಂದ್ರನಾಥ್ ನಾದ ಹಾಗೂ ಜಿಲ್ಲಾ ಬಿಜೆಪಿ ವಕ್ತಾರರು ಮಾದಿಗ ಸಮಾಜದ ಮುಖಂಡ ಹಣಮಂತ ಇಟಗಿ ಅವರು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ತನ್ನ ಹಳೇ ಚಾಳಿಯಂತೆ ಅದೇ ವಿಳಂಬ ಧೋರಣೆಯನ್ನು ಮುಂದುವರಿಸಿರುವುದು ಖಂಡನೀಯ. ಆಗಸ್ಟ್ 1 ಕ್ಕೆ ಸುಪ್ರೀಂಕೋರ್ಟ್ ತೀರ್ಪು ಬಂದು ಒಂದು ವರ್ಷ ಆದರೂ ಕರ್ನಾಟಕ ಸರ್ಕಾರ ಒಳ ಮೀಸಲಾತಿ ಜಾರಿಯಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜನಾಕ್ರೋಶ ಪ್ರತಿಭಟನೆಗಳು ದೊಡಮಟ್ಟದಲ್ಲಿ ನೆಡೆದಿದ್ದವು. ಈ ಪ್ರತಿಭಟನೆಯಿಂದ ಕರ್ನಾಟಕ ಸರ್ಕಾರ ಎದ್ದು ಕುಂತಿದೆ. ಆದರೆ ನಡಿಗೆ ಶುರು ಮಾಡಿಲ್ಲ . ಕೆಲವರು ಸರ್ಕಾರವನ್ನು ಹಿಂದಕ್ಕೆ ಎಳೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ನ್ಯಾ ನಾಗಮೋಹನ್ ದಾಸ್ ಅವರ ವರದಿಯನ್ನು ಕರ್ನಾಟಕ ಸರ್ಕಾರ ಸ್ವೀಕರಿಸಿದೆ . ಆದರೆ ವರದಿಯ ಶಿಫಾರಸ್ಸನ್ನು ಜಾರಿ ಮಾಡಲು ಮುಂದಾಗಿಲ್ಲ . ಸರ್ಕಾರದ ಈ ನಡೆ ವಿಳಂಬ ನೀತಿ ಮುಂದುವರೆಸಿರುವುದನ್ನು ತೋರಿಸುತ್ತದೆ. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಯಕತ್ವದ ಛಾತಿ ತೋರಿಸುವಲ್ಲಿ ವಿಫಲರಾಗಿದ್ದಾರೆ . ಕಾಲೆಳೆಯುವವರಿಂದ ಸಿದ್ಧರಾಮಯ್ಯ ಹೊರಬಂದು ನ್ಯಾ ನಾಗಮೋಹನ್ ದಾಸ್ ಅವರ ಶಿಫಾರಸ್ಸಿನ ಅನ್ವಯ ಒಳ ಮೀಸಲಾತಿ ಜಾರಿ ಮಾಡುವ ತೀರ್ಮಾನವನ್ನು ಘೋಷಿಸಬೇಕಿತ್ತು, ಆದರೆ ಈ ನಿರೀಕ್ಷೆ ಹುಸಿಯಾಗಿದೆ ಎಂದು ತಿಳಿಸಿದ್ದಾರೆ.

ನ್ಯಾ ಸದಾಶಿವ ಆಯೋಗ , ಮಾಧುಸ್ವಾಮಿ ಆಯೋಗ , ಈಗ ನ್ಯಾ ನಾಗಮೋಹನ ದಾಸ್ ಆಯೋಗ ಎಲ್ಲ ಮೂರು ಆಯೋಗಗಳು ಕರ್ನಾಟಕದಲ್ಲಿ ಮಾದಿಗ ಮತ್ತು ಅದರ ಉಪಜಾತಿಗಳೆ ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ದೊಡ್ಡ ಸಮೂಹ ಎಂದು ಸ್ಪಷ್ಟವಾಗಿ ಹೇಳಿವೆ . ಎಲ್ಲಾ ಆಯೋಗಗಳು ಮಾದಿಗ ಉಪ ಜಾತಿಗಳ ಗುಂಪಿಗೆ 6% ಮೀಸಲಾತಿಯನ್ನು ನಿಗದಿಪಡಿಸಿವೆ . ಹೀಗಾಗಿ ಸಿದ್ಧರಾಮಯ್ಯ ಸರ್ಕಾರ ಮಾದಿಗರ ಪಾಲಿನ 6% ಮೀಸಲಾತಿಯನ್ನು ಪ್ರತ್ಯೇಕಿಸಿ ಘೋಷಿಸಲಿ . ಉಳಿದ ಹಂಚಿಕೆಯನ್ನು ನಿಧಾನವಾಗಿ ಮಾಡಲಿ ಎಂಬುದು ನಮ್ಮ ಸ್ಪಷ್ಟ ಆಗ್ರಹವಾಗಿದೆ ಎಂದು ತಿಳಿಸಿದ್ದಾರೆ

ಕರ್ನಾಟಕ ಸರ್ಕಾರ ಮಾದಿಗರಿಗೆ ಪ್ರತ್ಯೇಕ ಶೇ 6 ರ ಮೀಸಲಾತಿಯನ್ನು ವಿಧಾನಸಭಾ ಅಧಿವೇಶನದ ಮೊದಲ ದಿನವೇ ಘೋಷಿಸಬೇಕು . ಇಲ್ಲವಾದರೆ ಮತ್ತೆ ಮಾದಿಗ ಸಂಬಂಧಿತ ಜಾತಿಗಳು ಬೀದಿಗೆ ಇಳಿದು ಉಗ್ರ ಹೋರಾಟಕ್ಕೆ ಕೈ ಇಳಿಯಬೇಕಾಗುತ್ತದೆ ಎಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!