ನ್ಯಾ. ನಾಗಮೋಹನ ದಾಸ್ ಒಳ ಮೀಸಲಾತಿ ವರದಿ ಅವೈಜ್ಞಾನಿಕ | ಬಲಗೈ ಸಮುದಾಯಕ್ಕೆ ಅನ್ಯಾಯ: ಬೆಣ್ಣೂರಕರ್ ಆರೋಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿಯು ಅವೈಜ್ಞಾನಿಕವಾಗಿ ಕೂಡಿದ್ದು, ಅದನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಒಳ ಮೀಸಲಾತಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಬಲಗೈ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮೋಹನದಾಸ್ ವರದಿಯಲ್ಲಿ ಒಳ ಮೀಸಲಾತಿ ಹಂಚಿಕೆ ಮಾಡುವ ಪ್ರಸ್ತಾವದಲ್ಲಿ ಬಲಗೈ ಸಮುದಾಯವನ್ನು ಬೇರೆ–ಬೇರೆ ವರ್ಗಗಳಲ್ಲಿ ಸೇರಿಸಲಾಗಿದೆ. ಇದರಿಂದ ನಮ್ಮ ಸಮುದಾಯಕ್ಕೆ ಅನ್ಯಾಯ ಆಗುವ ಸಾಧ್ಯತೆ ಇದ್ದು, ಇದನ್ನು ಸರಿಪಡಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.
ಎರಡು ಅಥವಾ ಹೆಚ್ಚಿನ ಜಾತಿಗಳ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಲಿಸಿದಾಗ ಸಾಮ್ಯತೆ ಕಂಡು ಬಂದಲ್ಲಿ ಅವುಗಳನ್ನು ಒಟ್ಟಾರೆ ಗುಂಪುಗಳನ್ನಾಗಿ ಸೇರಿಸಬೇಕು. ಆದರೆ ಇದನ್ನು ಮನಸೋ ಇಚ್ಛೆ ಉಲ್ಲಂಘನೆ ಮಾಡಿ, ಬಲಗೈ ಸಮುದಾಯವನ್ನು ಪ್ರವರ್ಗ–ಎ, ಪ್ರವರ್ಗ–ಬಿ, ಪ್ರವರ್ಗ–ಸಿ ಹಾಗೂ ಪ್ರವರ್ಗ–ಇ ಗುಂಪಿನಲ್ಲಿ ಸೇರಿಸಲಾಗಿದೆ ಹೀಗಾಗಿ ಈ ವರದಿ ವೈಜ್ಞಾನಿಕವಾಗಿ ಕೂಡಿದೆ ಎಂದು ಆರೋಪಿಸಿದರು.
ನ್ಯಾಯಮೂರ್ತಿ ಶ್ರೀ ನಾಗಮೋಹನ್ದಾಸ್ ರವರ ಅಧ್ಯಕ್ಷತೆಯ ಒಳ ಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವು ಆ.4 ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನಸಂಖ್ಯೆಯನ್ನು ವ್ಯವಸ್ಥಿತಿವಾಗಿ ಮತ್ತು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿ ಒಳ ಮೀಸಲಾತಿಯ ಪ್ರಮಾಣವನ್ನು ಸಹ ಕಡಿಮೆ ಮಾಡಿರುವುದು ಖಂಡನೀಯ ಎಂದರು.
ಜಸ್ಟೀಸ್ ನಾಗಮೋಹನ್ದಾಸ್ ಆಯೋಗವು ನೀಡಿರುವ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿದರೆ ಅವರಿಗೆ ಹೊಲೆಯ ಸಂಬಂಧಿತ 49 ಉಪನಾಮಗಳಿಂದ ಕರೆಯಲ್ಪಡುವ ಜಾತಿಗಳ ಬಗ್ಗೆ ಕನಿಷ್ಠ ಜ್ಞಾನವಿಲ್ಲದಿರುವುದು ಕಂಡು ಬರುತ್ತದೆ. ಹಾಗೆಯೇ ಜಾತಿಗಳೇ ಅಲ್ಲವೆಂದು ಸ್ವತಃ ಆಯೋಗವೇ ಹೇಳಿದ ಆದಿ ಆಂಧ್ರ, ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಗುಂಪುಗಳಿಗೆ ಶೇ. 1 ರಷ್ಟು ಮೀಸಲಾತಿ ಕೊಟ್ಟಿರುವ ಬಲಗೈ ಜಾತಿಗಳಿಗೆ ಮಾಡಿದ ಘೋರ ಅನ್ಯಾಯವಾಗಿರುತ್ತದೆ ಎಂದು ಹೇಳಿದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ತಮ್ಮ ಕಾರ್ಯಾರಂಭದ ಮೊದಲ ದಿನದಿಂದಲೂ ಹೊಲೆಯ ಸಂಬಂಧಿತ ಬಲಗೈ ಜಾತಿಗಳ ಪೂರ್ವಾಗ್ರಹವಾಗಿದ್ದರೆಂದೂ, ವ್ಯವಸ್ಥಿತವಾಗಿ ಹಾಗೂ ಪ್ರಜ್ಞಾ ಪೂರ್ವಕವಾಗಿಯೇ ಬಲಗೈ ಜಾತಿ ಜನಾಂಗಗಳ ಸಂಖ್ಯೆ ಕಡಿಮೆ ಮಾಡುವ ದುರುದ್ದೇಶದಿಂದಲೇ ಜಾತಿಗಳೇ ಅಲ್ಲದ ಆದಿ ಆಂಧ್ರ, ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಗುಂಪುಗಳಿಗೆ ಶೇ 1 ರಷ್ಟು ಮೀಸಲಾತಿಯನ್ನು ನೀಡಿರುತ್ತದೆ.
ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಮಾಡಿರುವ ಪ್ರಮಾದಗಳನ್ನು ಸರಿಪಡಿಸಿ ಒಳ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತಂದು ಅದರಲ್ಲಿ ಬಲಗೈ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಯುತವಾಗಿ ಬರಬೇಕಾದ ಒಳ ಮೀಸಲಾತಿಯ ಶೇಖಡವಾರು ಭಾಗಾಂಶವನ್ನು ನೀಡಬೇಕು ಒತ್ತಾಯಿಸಿದರು.
ನ್ಯಾಯಮೂರ್ತಿ ನಾಗಮೋಹನ ದಾಸ್ ಸರ್ಕಾರಕ್ಕೆ ಸಲ್ಲಿಸಿದ ಒಳ ಮೀಸಲಾತಿ ವರದಿ ವೈಜ್ಞಾನಿಕವಾಗಿ ಹಾಗೂ ದುರುದ್ದೇಶಪೂರಿತವಾಗಿ ಕೂಡಿದೆ ಹೀಗಾಗಿ ಆ.16 ರಂದು ಸಚಿವ ಸಂಪುಟದಲ್ಲಿ ಯಾವುದೇ ಕಾರಣಕ್ಕೂ ವರದಿ ಅಂಗೀಕರಿಸಬಾರದು ಎಂದು ಮನವಿ ಮಾಡಿದರು.

