ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜೀ ಅವರ ನಿಧನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಂಬನಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಶರಣರ ನಾಡಾದ ಕಲಬುರಗಿಯಲ್ಲಿ ಶರಣ ಪರಂಪರೆಯ ಪ್ರಮುಖ ಕೇಂದ್ರವಾಗಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಶರಣಬಸಪ್ಪ ಅಪ್ಪಾ ಅವರು ಲಿಂಗಕ್ಯರಾಗಿರುವುದು ಅತೀವ ನೋವಿನ ವಿಷಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಂಬನಿ ಮಿಡಿದಿದ್ದಾರೆ.
ಕಾಯಕ ಜೀವಿಯಾಗಿ, ಮಹಾ ದಾಸೋಹಿಯಾಗಿ, ಶರಣ ಪರಂಪರೆಯ ಉದಾತ್ತ ಚಿಂತನೆಗಳ ವಕ್ತಾರರಾಗಿ, ಕಲಬುರಗಿ ಜನತೆಗೆ ತಾತ್ವಿಕ ಮಾರ್ಗದರ್ಶಕರಾಗಿದ್ದ ಶ್ರೀಗಳು ಸಮಸ್ತ ಜನರ ಏಳಿಗೆ ಬಯಸುತ್ತಾ, ಜಿಲ್ಲೆಯ ಸೌಹಾರ್ಧ ಪರಂಪರೆಗೆ ಶಕ್ತಿಯಾಗಿದ್ದರು.
ನಾನು ಅವರಿಂದ ರಾಜಕೀಯ ಮೌಲ್ಯಗಳ, ಬದುಕಿನ ಮೌಲ್ಯಗಳ ಅರಿವನ್ನು ಪಡೆದಿದ್ದೇನೆ, ನನಗೆ ಅವರು ಬಹುದೊಡ್ಡ ಪ್ರೇರಕ ಶಕ್ತಿಯಾಗಿ, ಮಾರ್ಗದರ್ಶಕರಾಗಿ ಮುನ್ನಡೆಸಿದವರಾಗಿದ್ದರು, ಇಂದು ಅವರಿಲ್ಲ ಎಂದು ಕಲ್ಪಿಸಿಕೊಳ್ಳುವುದು ನನಗೆ ಅತ್ಯಂತ ಕಷ್ಟದ ಸನ್ನಿವೇಶ.
ಬಂದೆನವಾಜ್ ದರ್ಗಾದ ಡಾ. ಸಯ್ಯದ್ ಶಾ ಖುಸ್ರೋ ಹುಸೇನಿಯವರು ಮತ್ತು ಶರಣಬಸವೇಶ್ವರ ಮಠದ ಪೂಜ್ಯ ಶರಣಬಸಪ್ಪ ಅಪ್ಪಾ ಈ ಇಬ್ಬರೂ ಕಲಬುರಗಿಯ ಭಾವೈಕ್ಯತೆಗೆ ಎರಡು ಕಣ್ಣುಗಳಂತಿದ್ದವರು, ಒಂದು ವರ್ಷದ ಅವಧಿಯಲ್ಲಿ ಈ ಇಬ್ಬರೂ ಮಹನೀಯರನ್ನು ಕಳೆದುಕೊಳ್ಳುವ ಮೂಲಕ ಎರಡು ಕಣ್ಣುಗಳನ್ನು ಕಳೆದುಕೊಂಡು ಕತ್ತಲಲ್ಲಿ ನಿಂತಂತೆ ಭಾಸವಾಗುತ್ತಿದೆ.
ಸದಾ ಸಮಾಜದ ಔನತ್ಯವನ್ನು ಬಯಸುತ್ತಿದ್ದ ಡಾ. ಶರಣಬಸಪ್ಪಾ ಅಪ್ಪ ಅವರು, ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದುದು, ವಿದ್ಯೆ ಎಂಬುದು ಅಭ್ಯಾಸಿಗನ ಕೈವಶ. ಅದು ಕೇವಲ ಉಳ್ಳವರ ಸೊತ್ತಲ್ಲ ಎಂಬ ಆಶಯದೊಂದಿಗೆ ತಮ್ಮ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಸರ್ವರಿಗೂ ಜ್ಞಾನದಾಸೋಹ ನೀಡಿದ್ದಾರೆ.
91 ವರ್ಷಗಳ ತುಂಬು ಜೀವನದಲ್ಲಿ ಅವರು ಸಮಾಜಕ್ಕೆ ನೀಡಿದ್ದು ಅಪಾರ. ಕಲಬುರಗಿ ಜಿಲ್ಲೆಯ ಜನತೆಯ ಏಳಿಗೆಯಲ್ಲಿ ಅವರ ಈ ಜ್ಞಾನದಾಸೋಹವು ಪ್ರಮುಖ ಮೆಟ್ಟಿಲಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಮಹಾ ದಾಸೋಹಿ ಶ್ರೀ ಶರಣಬಸಪ್ಪ ಅಪ್ಪಾ ಅವರ ಆತ್ಮಕ್ಕೆ ಶಾಂತಿ ಸಿಗಲಿ, ನಾನೂ ಸೇರಿದಂತೆ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ, ಎಲ್ಲರಿಗೂ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ದೊರಕಲಿ ಎಂದು ಆಶಿಸುತ್ತೇನೆ. ಶ್ರೀಗಳು ನೀಡಿದ ಮಾರ್ಗದರ್ಶನವು ನಮ್ಮೆಲ್ಲರಿಗೂ ಸದಾ ಪ್ರೇರಕ ಶಕ್ತಿಯಾಗಿರಲಿದೆ ಎಂದು ಭಾವಿಸಿದ್ದೇನೆ.
