ಕಲ್ಯಾಣ ಕರ್ನಾಟಕ ಪ್ರಥಮ ಪತ್ರಕರ್ತರ ಸಮ್ಮೇಳನ | ಜನಪ್ರತಿನಿಧಿಗಳ, ಅಧಿಕಾರಿಗಳ ಕಣ್ಣು ತೆರೆಸುವ ಶಕ್ತಿ ಪತ್ರಕರ್ತರಲ್ಲಿದೆ: ಅಲ್ಲಮಪ್ರಭು ಪಾಟೀಲ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲಿ ಪತ್ರಿಕಾ ಅಂಗ ಪ್ರಮುಖವಾಗಿದ್ದು, ಜನಪ್ರತಿನಿಧಿಗಳ, ರಾಜಕಾರಣಿಗಳ ಹಾಗೂ ಅಧಿಕಾರಿಗಳ ಗಮನ ಸೆಳೆಯುವ ಹಾಗೂ ಕಣ್ಣು ತೆರೆಸುವ ಕೆಲಸ ಪತ್ರಕರ್ತರು ಮಾಡುತ್ತಾರೆ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪ್ರಜಾ ಸುದ್ದಿ ಕನ್ನಡ ದಿನಪತ್ರಿಕೆಯ 15 ನೇ ವರ್ಷದ ಸಂಭ್ರಮದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಪ್ರಥಮ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ರಕ್ಷಕರು, ನೇರವಾಗಿ ಹೇಳುವ ಛಾತಿ ಮತ್ತು ಶಕ್ತಿ ಪತ್ರಕರ್ತರಲ್ಲಿದೆ ಎಂದರು. ಸುದ್ದಿ ನೀಡಲು ಜೀವದ ಹಂಗನ್ನು ತೊರೆದು ಪತ್ರಕರ್ತರು ಮಳೆ ಬಿಸಿಲು ಹಾಗೂ ಚಳಿ ಎನ್ನದೇ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಇಂದಿನ ಕಷ್ಟದ ಸಂದಿಗ್ಧ ಪರಿಸ್ಥಿತಿಯಲ್ಲಿ 15 ವರ್ಷಗಳ ಕಾಲ ಪತ್ರಿಕೆ ನಡೆಸಿಕೊಂಡು ಬೆಂದಿರುವ ಸಂಪಾದಕ ಶರಣಬಸಪ್ಪ ಸೂಗೂರ ಅವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿ ತಿಂಗಳು ಜಾಹೀರಾತು ನೀಡಿ ಪತ್ರಿಕೆಗಳಿಗೆ ಬೆಂಬಲ ನೀಡಬೇಕೆಂಬ ಬೇಡಿಕೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಈ ನಿಟ್ಟಿನಲ್ಲಿ ಪತ್ರಕರ್ತರ ಧ್ವನಿಯಾಗಿ ಯಾವತ್ತೂ ಇರುತ್ತೇನೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ಸಮ್ಮೇಳನದ ಅಧ್ಯಕ್ಷ ಡಾ.ಶಿವರಂಜನ ಸತ್ಯಂಪೇಟೆ ಮಾತನಾಡಿ, ಪ್ರಸ್ತುತ ಪತ್ರಕರ್ತರಿಗೆ ಅಧ್ಯಯನ ಇಲ್ಲ, ಸರಿಯಾಗಿ ಓದಲು ಮತ್ತು ಬರೆಯಲು ಬರುವುದಿಲ್ಲ ಇದು ದುರಂತ, ಪತ್ರಕರ್ತರಲ್ಲಿ ವಿನಯ ಎನ್ನುವುದು ಮುಖ್ಯ ಆದರೆ ಈಗ ಅದು ಇಲ್ಲವೇ ಇಲ್ಲ, ಜೀವನದ ಅನುಭವದಿಂದ ಬಂದದ್ದು ಬರವಣಿಗೆಯೇ ಶಾಶ್ವತ ಎಂದು ಹೇಳಿದರು.
ಪತ್ರಿಕೆಗಳು ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ಸೋಷಿಯಲ್, ಡಿಜಿಟಲ್ ಮೀಡಿಯಾ ಹುಟ್ಟುಕೊಂಡಿವೆ ಎಂದು ಮಾರ್ಮಿಕವಾಗಿ ಹೇಳಿದರು.
ಪತ್ರಕರ್ತರು ಅಧ್ಯಯನಶೀಲರಾಗಬೇಕು ಈ ನಿಟ್ಟಿನಲ್ಲಿ ಜನರನ್ನು ಜಾಗೃತಿ ಮಾಡುವುದನ್ನು ಬಿಟ್ಟು ಮೂಢನಂಬಿಕೆಗೆ ಹೆಚ್ಚು ಒತ್ತು ನೀಡುತ್ತಿವೆ. ವೈಚಾರಿಕತೆ ಬೆಳೆಸುವ ನಿಟ್ಟಿನಲ್ಲಿ ಪತ್ರಕರ್ತರ ಸಮಾಜದ ಬೆಳವಣಿಗೆಗೆ ಕಂಕಣ ಬದ್ಧರಾಗಿ ಕೆಲಸ ಮಾಡಬೇಕು ಎಂದರು. ಪತ್ರಕರ್ತರ ವೃತ್ತಿ ಪವಿತ್ರವಾದದ್ದು ಹೀಗಾಗಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುದ್ದಿಗಳು ಬರೆಯಬೇಕು ಎಂದು ಹೇಳಿದರು.
ಮಾಡಬೇಕಾಗಿರುವುದೇನು:
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯಲ್ಲಿ ಸ್ಥಳೀಯ ಪತ್ರಿಕೆಗಳು ಸಹ ಮಹತ್ವದ ಪಾತ್ರವಹಿಸಿವೆ. ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳೀಯ ಸಚಿವ, ಶಾಸಕ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಮಾಡಬೇಕು. ಪತ್ರಕರ್ತರಾದವರು ಕನ್ನಡ ಸಾಹಿತ್ಯ ಹಾಗೂ ಪತ್ರಿಕೋದ್ಯಮದ ಹಲವು ಮಗ್ಗಲುಗಳನ್ನು ಓದುವ, ನೋಡುವ, ತಿಳಿಯುವ ಕುತೂಹಲದ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಬಸವಾದಿ ಶರಣರ, ಸೂಫಿಗಳ, ತತ್ವಪದಕಾರರ ನೆಲವಾದ ಕಲ್ಯಾಣ ಕರ್ನಾಟಕದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡುವ ಮೂಲಕ ಇಡೀ ನಾಡಿಗೆ ಕೀರ್ತಿ ತಂದುಕೊಡುವ ಮಹತ್ತರ ಜವಾಬ್ದಾರಿ ಇಂದಿನ ನಮ್ಮೆಲ್ಲರ ಮೇಲಿದೆ ಎಂದು ಸತ್ಯಂಪೇಟೆ ಹೇಳಿದರು.
ಆಗಬೇಕಿರುವುದೇನು:
ಹಿರಿಯ ಪತ್ರಕರ್ತರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸ್ಥಾಪಿಸಬೇಕು, ಕೆಕೆಆರ್‌ಡಿಬಿಯಿಂದ ಸ್ಥಳೀಯ ಪತ್ರಿಕೆಗಳಿಗೆ ಅಗತ್ಯ ಅನುದಾನ ನೀಡಬೇಕು, ಪತ್ರಕರ್ತರು ಹಾಗೂ ಅವರ ಕುಟುಂಬದ ಹಿತ ಕಾಪಾಡಲು ಸರ್ಕಾರ ವಿಶೇಷ ಯೋಜನೆಗಳನ್ನು ಘೋಷಿಸಬೇಕು, ಯುವ ಪೀಳಿಗೆಯ ಪತ್ರಕರ್ತರಿಗೆ ಓದುವ, ಬರೆಯುವ, ಭಾಷೆಯ ಬಳಕೆ ಕುರಿತಂತೆ ತರಬೇತಿ ನೀಡುವುದು, ಕನ್ನಡ ಪತ್ರಿಕೆಗಳಲ್ಲಿ ಕನ್ನಡದ ಪದಗಳನ್ನೇ ಹೆಚ್ಚು ಹೆಚ್ಚು ಬಳಸಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲಾಗುತ್ತಿರುವ ಮಾಧ್ಯಮದ ಮಂದಿಗಳಾದ ನಮ್ಮ ಮೇಲೆ ಸಾರ್ವಜನಿಕರು ನಮ್ಮ ಮೇಲೆ ಇಂದಿಗೂ ವಿಶ್ವಾಸವಿಟ್ಟುಕೊಂಡಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಕೂಡ ನಮ್ಮದಾಗಬೇಕಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಮಾದ್ಯಮ ಸಂಶೋಧಕ ದಿಲೀಪ್ ನರಸಯ್ಯ ಮೈಸೂರು, ಡಿಎಸ್ಎಸ್ ರಾಜ್ಯ ಸಂ ಸಂಚಾಲಕ ಮರಿಯಪ್ಪ ಹಳ್ಳಿ, ಸಂಪಾದಕರ ಸಂಘದ ಅಧ್ಯಕ್ಷ ಗುರುರಾಜ್ ಕುಲಕರ್ಣಿ, ಬಿ.ವಿ.ಚಕ್ರವರ್ತಿ, ಚಂದ್ರಶೇಖರ ಕವಲಗಾ, ರೇವಣಸಿದ್ದಪ್ಪ ಪಾಟೀಲ, ಸದಾನಂದ ಪೆರ್ಲಾ, ದೇವಿಂದ್ರಪ್ಪ ಅವಂಟಿ, ಬಸವರಾಜ ಚೀನಿವಾರ್, ಸೂರ್ಯಕಾಂತ ಜಮಾದಾರ್, ಅಜೀಜುಲ್ಲಾ ಸರ್ಮಸ್ತ್, ಬಸವರಾಜ ಪಾಸ್ವಾನ್, ರಾಜು ದೇಶಮುಖ್, ರಾಜಕುಮಾರ್ ಬೆಣ್ಣೂರ್, ಶಿವಪುತ್ರ ಹಾಗರಗಿ, ಸಿ.ಎಸ್.ಮಾಲಿಪಾಟೀಲ ಸೇರಿದಂತೆ ಇತರರು ಇದ್ದರು.
ಸಮ್ಮೇಳನ ಅಧ್ಯಕ್ಷ ಡಾ.ಶಿವರಂಜನ ಸತ್ಯಂಪೇಟೆ ಅವರ ಬದುಕು ಬರಹ ಕುರಿತು ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಮಾತನಾಡಿದರು. ಹಿರಿಯ ಪತ್ರಕರ್ತ ಪ್ರಭಾಕರ ಜೋಶಿ ಆಶಯ ನುಡಿಗಳು ಹೇಳಿದರು. ಸುರೇಶ್ ಬಡಿಗೇರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಾಬುರಾವ್ ಕೋಬಾಳ ಪ್ರಾರ್ಥಿಸಿದರು, ಸಂಪಾದಕ ಶರಣಬಸಪ್ಪ ಸೂಗೂರ ಸ್ವಾಗತಿಸಿದರು, ರಾಜಕುಮಾರ್ ಮಾಳಗೆ ನಿರೂಪಿಸಿದರು.

