ಕೇಂದ್ರ, ರಾಜ್ಯ ಸರ್ಕಾರಗಳು ಮಾನವೀಯ ದೃಷ್ಟಿಯಿಂದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಅಯ್ಯಪ್ಪ ರಾಮತೀರ್ಥ ಒತ್ತಾಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿಪರೀತ ಮಳೆ ಹಾಗೂ ಪ್ರವಾಹದಿಂದಾಗಿ ರೈತರ ಬದುಕು ಅತಂತ್ರವಾಗಿದೆ ಹೀಗಾಗಿ ಮಾನವೀಯ ದೃಷ್ಟಿಯಿಂದ ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಪರೀತ ಮಳೆಯಿಂದ ಹಾಗೂ ಪ್ರವಾಹದಿಂದಾಗಿ ರೈತರ ಬೆಳೆ ಸಂಪೂರ್ಣ ನಾಶವಾಗಿವೆ ಹಾಗೂ ಮನೆಗಳಿಗೆ ನೀರು ನುಗ್ಗಿ ದವಸಧಾನ್ಯ ದಿನಬಳಕೆಯ ವಸ್ತುಗಳು ಹಾನಿಯಾಗಿದ್ದು ಬಡ ಕುಟುಂಬಗಳು ಬೀದಿ ಪಾಲಾಗಿದೆ ಹೀಗಾಗಿ ರೈತರ ಹಾಗೂ ಸಂತ್ರಸ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಭೀಮಾ ನದಿಯ ಪ್ರವಾಹಕ್ಕೆ ಅಂದಾಜು 3 ಸಾವಿರ ಎಕರೆ ರೈತರ ಜಮೀನು ಮುಳುಗಡೆಯಾಗಿದೆ, ಕಷ್ಟಪಟ್ಟು ಬೆಳೆದ ಉದ್ದು, ಹೆಸರು, ತೊಗರಿ, ಭತ್ತ, ಹತ್ತಿ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ನಾಶವಾಗಿವೆ, ಇದರಿಂದ ರೈತರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ ಹೀಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪರಿಹಾರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ರೈತರ ಪರಿಸ್ಥಿತಿ ಹಾಗೂ ಸಂತ್ರಸ್ತರಿಗೆ ಭೇಟಿ ಮಾಡಿ ವಸ್ತುಸ್ಥಿತಿ ಅರಿಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಝಯೇಂದ್ರ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಸೇರಿದಂತೆ ಬಿಜೆಪಿ ನಾಯಕರು ಪ್ರವಾಹ ಪೀಡಿತ ಹೊನಗುಂಟಾ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು.
ಜನರ ಗೋಳು ಗಗನಕ್ಕೆ ತಲುಪಿದೆ ಈ ತಕ್ಷಣ ಮಾನವೀಯ ದೃಷ್ಟಿಯಿಂದ ರೈತರಿಗೆ ಪರಿಹಾರ ನೀಡಬೇಕು ಹಾಗೂ ಪುನರ್ ವಸತಿ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು. ಪ್ರವಾಹಕ್ಕೆ ಮುಳುಗಡೆಯಾದ ಮನೆಗಳ ಕುಟುಂಬಸ್ಥರಿಗೆ ಅನಾಥಪ್ರಜ್ಞೆ ಕಾಡುತ್ತಿದೆ. ಮಕ್ಕಳ ಪಠ್ಯ ಪುಸ್ತಕ ಹಾಳಾಗಿವೆ ಮಕ್ಕಳ ಶಿಕ್ಷಣಕ್ಕೆ ವಿಶೇಷ ಕಾಳಜಿ ವಹಿಸಿ ಅವರಿಗೆ ಬೇಕಾದ ಅಗತ್ಯ ಪಠ್ಯಪುಸ್ತಕಗಳು ಹಾಗೂ ಕುಟುಂಬ ನಿರ್ವಹಣೆಗೆ ಬೇರೆ ದವಸಧಾನ್ಯ ಹಾಗೂ ದಿನಸಿ ಪೂರೈಕೆ ಮಾಡುವ ಕಡೆ ತಾಲೂಕು ಆಡಳಿತ ಗಮನ ಹರಿಸಬೇಕು ಎಂದು ಹೇಳಿದರು.

