ಎಕರೆಗೆ 25 ಸಾವಿರ ಬೆಳೆ ಹಾನಿ ಪರಿಹಾರ ಮತ್ತು ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕನ್ನು ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಿಸಿ, ಎಕರೆಗೆ 25 ಸಾವಿರ ಬೆಳೆ ಹಾನಿ ಪರಿಹಾರ ನೀಡಬೇಕು ಮತ್ತು ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ತಾಲೂಕು ಗೌರವಾಧ್ಯಕ್ಷ ಶಾಂತಕುಮಾರ್ ಮಳಖೇಡ ಮಾತನಾಡಿ, ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಸಂಕಷ್ಟದಲ್ಲಿ ಇದ್ದು, ಪ್ರಸ್ತುತ ವರ್ಷದಲ್ಲಿ ಅತಿಯಾದ ಮಳೆಯಿಂದಾಗಿ ಹಾಗೂ ಪ್ರವಾಹದಿಂದಾಗಿ ರೈತರ ಸಂಪೂರ್ಣ ಎಲ್ಲಾ ಬೆಳೆಗಳು ಹಾಳಾಗಿದ್ದು ಮತ್ತು ರೈತರ ಹಾಗೂ ಜನಸಾಮಾನ್ಯರ ಮನೆಗಳು ಹಾಗೂ ರೈತರ ವಡ್ಡು ಡೋಣಗಳು ಮತ್ತು ಚಿಕ್ ಡ್ಯಾಮಗಳು ಮತ್ತು ಹೊಲಗಳಿಗೆ ಸಂಪರ್ಕ ರಸ್ತೆ, ಗ್ರಾಮಗಳ ಮುಖ್ಯರಸ್ತೆ ಸಂಪೂರ್ಣ ಹಾಳಾಗಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಮೌನೇಶ್ ಭಂಕಲಗಿ ಮಾತನಾಡಿ, ಚಿತ್ತಾಪುರ ತಾಲೂಕಿನಲ್ಲಿ ಕಾಗಿಣಾ ಹಾಗೂ ಭೀಮಾ ನದಿಯ ಪ್ರವಾಹದಿಂದ ರೈತರ ಸಾವಿರಾರು ಎಕರೆ ಜಮೀನು ಮುಳುಗಡೆಯಾಗಿದೆ. ಕಷ್ಟಪಟ್ಟು ಸಾಲಸೂಲ ಮಾಡಿ ಎಕರೆಗೆ 20 ರಿಂದ 30 ಸಾವಿರ ಖರ್ಚು ಮಾಡಿ ಬೆಳೆದ ಉದ್ದು, ಹೆಸರು, ತೊಗರಿ, ಭತ್ತ, ಹತ್ತಿ ಸೇರಿದಂತೆ ತೋಟಗಾರಿಕೆ ಬೆಳೆಗಳು ಸಂಪೂರ್ಣ ನಾಶವಾಗಿದ್ದು ರೈತರು ಜೀವನ ನಡೆಸುವುದೇ ದುಸ್ತರವಾಗಿದೆ.ಪ್ರವಾಹದಿಂದ ನೂರಾರು ಮನೆಗಳು ಮುಳುಗಡೆಯಾಗಿದ್ದು ಕುಟುಂಬಸ್ತರು ಬೀದಿಪಾಲಾಗಿದ್ದಾರೆ. ದನಕರುಗಳು ಸಾವನಪ್ಪಿವೆ ಹೀಗಾಗಿ ಸರಕಾರ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಚಿತ್ತಾಪುರ ತಾಲೂಕಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಚಿತ್ತಾಪುರ ತಾಲೂಕಿನಲ್ಲಿ ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗುವ ಕಡಬೂರ, ಬಳವಡಗಿ ಸೇರಿದಂತೆ ಇತರೆ ಗ್ರಾಮಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಎಕರೆಗೆ 25 ಸಾವಿರ ಬೆಳೆ ಹಾನಿ ಪರಿಹಾರ ನೀಡಬೇಕು, ಪ್ರವಾಹದಿಂದ ಮುಳುಗಡೆಯಾಗಿದ್ದ ಕುಟುಂಬಸ್ತರ ಜೀವನ ನಿರ್ವಹಣೆಗಾಗಿ 10 ಸಾವಿರ ಪರಿಹಾರ ನೀಡಬೇಕು, ಪ್ರವಾಹದಿಂದ ಸಾವನಪ್ಪಿದ ದನಕರುಗಳ ವಾರಸುದಾರರಿಗೆ 50 ಸಾವಿರದಿಂದ 1 ಲಕ್ಷ ಪರಿಹಾರ ನೀಡಬೇಕು, ಕಡಲಿ ಬೀಜ ಹಾಗೂ ಡಿಎಪಿ ರಸಗೊಬ್ಬರ ಉಚಿತವಾಗಿ ನೀಡಬೇಕು, ಬೆಳೆ ವಿಮೆ ಶೀಘ್ರದಲ್ಲಿ ಬಿಡುಗಡೆ ಮಾಡಬೇಕು, ಕಳಪೆ ರಸಗೊಬ್ಬರ ಮತ್ತು ಬಯೋ ಕ್ರಿಮಿನಾಶಕ ಔಷದಿಗಳ ಮಾರುವ ಆಗೋ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು, ಅತಿಯಾದ ಮಳೆಯಿಂದ ಹದಗೆಟ್ಟ ರಸ್ತೆಗಳನ್ನು ಸುಧಾರಣೆ ಮಾಡಬೇಕೆಂಬ ಬೇಡಿಕೆಗಳ ಮನವಿ ಪತ್ರವನ್ನು ಓದಿದ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಅಲ್ಲೂರಕರ್ ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಕಲಬುರಗಿ ಜಿಲ್ಲಾಧ್ಯಕ್ಷ ಪ್ರಶಾಂತರೆಡ್ಡಿ ಮಾಲಿಪಾಟೀಲ, ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ, ಉಪಾಧ್ಯಕ್ಷ ರಮೇಶ್ ಬೊಮ್ಮನಳ್ಳಿ, ಅವರು ಮಾತನಾಡಿದರು. ಧಶರಥ ದೊಡ್ಡಮನಿ, ವಿಶ್ವರಾಜ್ ನೆನಕಿ, ರಮೇಶ್ ಬೊಮ್ಮನಳ್ಳಿ, ಬಸವರಾಜ ಇಂಗಳಗಿ, ಹಣಮಯ್ಯ ಕಲಾಲ್, ಬಸಲಿಂಗಪ್ಪಗೌಡ ದಂಡಗುಂಡ, ಯಲ್ಲಾಲಿಂಗ ಸುಲ್ತಾನಪೂರ, ರಾಕೇಶ್ ಮುಗುಳನಾಗಾಂವ, ವಿಠಲ್ ಕಟ್ಟಿಮನಿ, ಯಲ್ಲಯ್ಯ ಕಲಾಲ್, ಯಲ್ಲಾಲಿಂಗ ಪೂಜಾರಿ, ರಾಮರೆಡ್ಡಿ ಭಂಕಲಗಿ, ಮಲ್ಲಿಕಾರ್ಜುನ ಹೊನ್ನಪ್ಪನೋರ್, ಅಂಬಣ್ಣ ಹೊಳಿಕಟ್ಟಿ, ತಿಪ್ಪಣ್ಣ ಇವಣಿ, ಅರ್ಜುನ್ ಭಂಕಲಗಿ, ಅನೀಲ್ ಬೊಮ್ಮನೂರ, ಅಕ್ಷಯ ಸಾತನೂರು, ಚೆನ್ನಪ್ಪ ಮೂಲಿಮನಿ, ಶಿವುಕುಮಾರ ಹೊಸ್ಸುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪಿಎಸ್ಐ ಶ್ರೀಶೈಲ್ ಅಂಬಾಟಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

