Oplus_0

ನಾಲವಾರ ಮಠದಲ್ಲಿ ಶಿವಾನುಭವ ಚಿಂತನ, ದೀಪಾವಳಿ ಸಂಗೀತೋತ್ಸವ | ಮನಸ್ಸನ್ನು ಅರಳಿಸುವ ಶಕ್ತಿ ಸಂಗೀತಕ್ಕಿದೆ: ಡಾ.ಸಿದ್ಧತೋಟೇಂದ್ರ ಶ್ರೀ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಸಂಗೀತಕ್ಕೆ ನೋವು, ದುಃಖ, ಆತಂಕ, ಖಿನ್ನತೆಯನ್ನು ಮರೆಸುವ ಶಕ್ತಿ ಇದ್ದು ಮಾನಸಿಕ ಆರೋಗ್ಯ ವೃದ್ಧಿಗೆ ಸಂಗೀತವು ಒಂದು ಸಾಧನವಾಗಿ ಕೆಲಸ ಮಾಡುತ್ತದೆ ಎಂದು ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ನಾಲವಾರ ಶ್ರೀಮಠದಲ್ಲಿ ದೀಪಾವಳಿ ಅಮಾವಾಸ್ಯೆಯ ಪ್ರಯುಕ್ತ ಮಂಗಳವಾರ ರಾತ್ರಿ ಶ್ರೀಮಠದ ಶ್ರೀ ಸಿದ್ಧತೋಟೇಂದ್ರ ಸುವರ್ಣ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಚಿಂತನ ಹಾಗೂ ಸಂಗೀತೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ವಚನ ಸಾಹಿತ್ಯ ದಾಸರ ಹಾಡುಗಳು ಸರ್ವಜ್ಞನ ತ್ರಿಪದಿಗಳು ಸ್ವರ ವಚನಗಳಿಗೆ ಭಾವಗೀತೆಗಳಿಗೆ ಸಂಗೀತ ರೂಪ ನೀಡಿದರೆ ಎಲ್ಲವನ್ನೂ ಮರೆಸಿ ತನ್ನೊಳಗೆ ಸೆಳೆದುಕೊಳ್ಳುವ ಆಯಸ್ಕಾಂತದಂತಹ ಶಕ್ತಿ ಇದೆ. ಇದು ಮನಸ್ಸಿಗೆ ಚೈತನ್ಯ ನೀಡಿ, ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡ ನಿವಾರಣೆಗೂ ಇದೇ ಮದ್ದು ಎಂದು ಅವರು ಹೇಳಿದರು.

ಸಾಹಿತ್ಯ ಮತ್ತು ಸಂಗೀತಗಳು ಮನುಷ್ಯನಲ್ಲಿ ತಾಮಸ ಗುಣಗಳನ್ನು ಕಳೆದು ಸಾತ್ವಿಕತೆಯನ್ನು ತುಂಬುತ್ತವೆ. ನಮ್ಮ ಹಿರಿಯರು ಹಿಂದೆ ಹಬ್ಬ ಹರಿದಿನಗಳನ್ನು ಸಂಗೀತ ಸಾಹಿತ್ಯ ಗೋಷ್ಠಿಗಳ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದರು ಎಂದರು.

ಸಂಗೀತ ಮತ್ತು ಸಾಹಿತ್ಯಕ್ಕೆ ಸೋಲದ ಮನಸ್ಸುಗಳೇ ಇಲ್ಲ. ಹಾಗೇನಾದರೂ ಸೋಲದೇ ಇದ್ದರೆ ಅದು ಮನಸ್ಸೇ ಅಲ್ಲ ಎಂಬ ಮಾತನ್ನು ಉದಾಹರಿಸಿದ ಶ್ರೀಗಳು ನಾಲವಾರ ಶ್ರೀಮಠ ಭಕ್ತರಲ್ಲಿ ಕೇವಲ ಧಾರ್ಮಿಕ ಸಂಸ್ಕಾರ ಮಾತ್ರ ಬಿತ್ತದೇ ಕಳೆದ ನಾಲ್ಕು ದಶಕದಿಂದ ಸಾಹಿತ್ಯ ಹಾಗೂ ಸಂಗೀತದ ಅಭಿರುಚಿಯನ್ನು ಜನಮಾನಸದಲ್ಲಿ ಮೂಡಿಸುವ ಕಾರ್ಯ ಮಾಡಿಕೊಂಡು ಬರುತ್ತಿದೆ ಎಂದರು.

ದೀಪಾವಳಿಯ ಶುಭ ಸಂದರ್ಭದಲ್ಲಿ ಭಗವಂತ ನಾಡಿನ ಜನರ ಕಷ್ಟಗಳೆಂಬ ಕತ್ತಲೆಯನ್ನು ಕಳೆದು ಸುಖ-ಸಮೃದ್ಧಿಯ ಹೊಸಬೆಳಕನ್ನು ನೀಡಿ ಹರಸಿ ಆಶೀರ್ವದಿಸಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಮರಿಯಪ್ಪ ಮಾಳಬಾ ನಾಲವಾರ, ಪ್ರಭಾಕರ್ ರೆಡ್ಡಿ ತಾಂಡೂರ್ ತೆಲಂಗಾಣ, ಗುರುಶಾಂತಯ್ಯ ಸ್ವಾಮಿ ವಾಡಿ ಭಕ್ತರು ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಮಹಾಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ರುದ್ರಗೌಡ ಪಾಟೀಲ ರಾಂಪೂರ, ಮಲಕಪ್ಪ ಪಾಟೀಲ ರಾಯ್ಚೂರ್, ಶಿವರೆಡ್ಡಿ ಕುಲ್ಕುಂದಿ, ಶ್ರೀಕಾಂತ್ ಗೌಡ ಮಡ್ನಾಳ್ ಇಬ್ರಾಂಪುರ್, ಈರಣ್ಣ ಸಾವು ಇಂಗಳಗಿ, ಮಹಾದೇವ ಗಂವ್ಹಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೆರೆದ ಭಕ್ತರನ್ನು ಸಮ್ಮೋಹನಗೊಳಿಸಿದ ಸಂಗೀತೋತ್ಸವ:

ಇದೇ ಸಂದರ್ಭದಲ್ಲಿ ನಡೆದ ಸಂಗೀತೋತ್ಸವ ಕಾರ್ಯಕ್ರಮ ನೆರೆದ ಭಕ್ತರನ್ನು ಸಮ್ಮೋಹನಗೊಳ್ಳುವಂತೆ ಮಾಡಿತು. ಹಿರಿಯ ಗಾಯಕ ಶರಣಪ್ಪ ಗೋನಾಳ ಹಾಗೂ ಪ್ರತಿಭಾ ಗೋನಾಳ ರಾಯಚೂರು ಅವರ ಭಕ್ತಿಗೀತೆಗಳ ಹಾಗೂ ಜಾನಪದ ಗೀತೆಗಳು, ವಚನಗಳ ಗಾಯನ, ಯುವ ಗಾಯಕ ಸಿದ್ದು ಅವರಾದಿ ಹಾಡಿದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಬರೆದ ವಚನೋಲ್ಲಾಸ ಕೃತಿಯ ವಚನಗಳ ಸುಮಧುರ ಗಾಯನ ನೆರೆದಿದ್ದ ಸಹಸ್ರಾರು ಭಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದವು.

ಚಂದ್ರಶೇಖರ ಗೋಗಿ ಅವರ ಕೊಳಲು ವಾದನ, ವೀರೇಂದ್ರ ಕುರಡಿ, ತಬಲಾ ಸುಧಾಕರ ಅಸ್ಕಿಹಾಳ, ಕೀಬೋರ್ಡ್ ಗೋಪಾಲ ಗುಡಿಬಂಡಿ, ಪ್ಯಾಡ್ ಅವರ ಕ್ಲಾರಿಯೋನೆಟ್ ವಾದನ, ಕುಮಾರಿ ಪ್ರತ್ಯಕ್ಷ ಚಿತ್ತಾಪುರ ಅವರಿಂದ ಭರತನಾಟ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯದರ್ಶಿ ವಿರೂಪಾಕ್ಷಯ್ಯ ಸ್ವಾಮಿ ನಿರೂಪಿಸಿ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!