Oplus_0

ತೊಗರಿ ಅಭಿವೃದ್ಧಿ ಮಂಡಳಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಸೈಯದ್ ಮಹಿಮೂದ್ ಸಾಹೇಬ್

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತೊಗರಿ ಅಭಿವೃದ್ಧಿ ಮಂಡಳಿ ಅಭಿವೃದ್ಧಿಗೆ ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ, (ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ) ಅಧ್ಯಕ್ಷ ಸೈಯದ್ ಮಹಿಮೂದ್ ಸಾಹೇಬ್ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೊಗರಿಯ ನಾಡು ಎಂದೇ ಖ್ಯಾತಿ ಪಡೆದಿರುವ ಕಲಬುರಗಿ ಭಾಗದ ರೈತರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟು ದೊಡ್ಡ ಜವಾಬ್ದಾರಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೀರ್ತಿ ತರುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ತೊಗರಿ ಖರೀದಿ ಕೇಂದ್ರ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಆರಂಭ ಮಾಡುವುದರಿಂದ ರೈತರಿಗೆ ಅನುಕೂಲ ಆಗುವುದಿಲ್ಲ ಆ ವೇಳೆಗಾಗಲೇ ರೈತರು ಖಾಸಗಿ ದಾಲ್ ಮಿಲ್ ಗಳಿಗೆ ಮಾರಾಟ ಮಾಡಿರುತ್ತಾರೆ ಹೀಗಾಗಿ ಇದನ್ನು ಮನಗಂಡು ಡಿಸೆಂಬರ್ ಅಥವಾ ಜನವರಿಯಲ್ಲಿ ಖರೀದಿ ಕೇಂದ್ರ ಪ್ರಾರಂಭ ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತೊಗರಿ ಬೆಳೆ ಸೇರಿದಂತೆ ದ್ವಿದಳ ಧಾನ್ಯಗಳಿಗೆ ಸೂಕ್ತ ಬೆಂಬಲ ಬೆಲೆ ದೊರಕಿಸುವ ಹಾಗೂ ಸಣ್ಣ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತೊಗರಿ ಖರೀದಿ ಮಿತಿ ಹೆಚ್ಚಳ ಮಾಡುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.

ಮಂಡಳಿಗೆ ಪ್ರತಿ ವರ್ಷ 5 ಕೋಟಿ ಅನುದಾನ ಬರುತ್ತಿದೆ ಇದನ್ನು ಹೆಚ್ಚಿಸುವ ಸಲುವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ ಎಂದರು.

ಈಗಾಗಲೇ ಮಂಡಳಿ ವತಿಯಿಂದ ಭೀಮಾ ಹೆಸರಲ್ಲಿ 1 ಕೆ.ಜಿಯ ತೊಗರಿ ಬೆಳೆ ಪ್ಯಾಕೇಜ್ ಮಾಡಿ ಮಂಡಳಿ ವತಿಯಿಂದ ನೇರವಾಗಿ ಮಾರ್ಕೆಟ್ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ದುಬೈಗೆ ಮಾರ್ಕೆಟ್ ಮಾಡುವ ಮೂಲಕ ವಿಸ್ತಾರ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!