ಗುರುಮಠಕಲ್ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಣೆ | ಅಧಿಕಾರ ದುರುಪಯೋಗ ಮಾಡಿಕೊಂಡು ಕಾರ್ಯಕ್ರಮ ರದ್ದು ಮಾಡಿಸಿದ ಪ್ರಿಯಾಂಕ್ ಖರ್ಗೆ ವಿರುದ್ಧ ಸುರೇಶ ಅಂಬಿಗೇರ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಗುರುಮಠಕಲ್ ಪಟ್ಟಣದಲ್ಲಿ ಆರ್ ಎಸ್ ಎಸ್ ನೂರನೇ ವರ್ಷದ ವಿಜಯದಶಮಿ ಅಂಗವಾಗಿ ಅಕ್ಟೋಬರ್ 25 ರಂದು ನಡೆಯಬೇಕಿದ್ದ ಪಥ ಸಂಚಲನ ರದ್ದಾಗಲು ಸಚಿವ, ಪ್ರಿಯಾಂಕ್ ಖರ್ಗೆಯವರ ಅಧಿಕಾರ ದುರ್ಬಳಕೆಯೇ ಕಾರಣವಾಗಿದ್ದು, ತನ್ನ ಮಾವ ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದ ರಾಧಾಕೃಷ್ಣ ದೊಡ್ಡಮನಿ ಇವರ ವ್ಯಾಪ್ತಿಯಲ್ಲಿ ಬರುವ ಊರುಗಳಲ್ಲಿ ಪಥಸಂಚಲನಕ್ಕೆ ವಿಘ್ನ ಉಂಟು ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮಾಜಿ ಅದ್ಯಕ್ಷ ಯಾದಗಿರಿ ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸುರೇಶ ಅಂಬಿಗೇರ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಆರ್.ಎಸ್.ಎಸ್. 100 ವರ್ಷಗಳಿಂದ ದೇಶಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ದೇಶಭಕ್ತ ಸಂಘಟನೆಯಾಗಿದ್ದು, ಈ ಸಂಘಟನೆಯ ವಿರುದ್ಧ ಷಡ್ಯಂತ್ರ ಮಾಡಿ ಪಥಸಂಚಲನಕ್ಕೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿತ್ತಾಪುರ, ಸೇಡಂ ನಂತರ ಈಗ ಗುರುಮಠಕಲ್ ನಲ್ಲಿಯೂ ಪಥಸಂಚಲನಕ್ಕೆ ವಿಘ್ನ ಉಂಟು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದಷ್ಟೇ ಅಲ್ಲದೇ ದೇಶಭಕ್ತ ಸಂಘಟನೆಯ ಸಾತ್ವಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ದುರುದ್ದೇಶದಿಂದ ದಲಿತರು, ಹಿಂದುಳಿದವರು ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಮೂಲಕ ಉದ್ದೇಶಪೂರ್ವಕವಾಗಿ ಅದೇ ದಿನದಂದು ಕಾರ್ಯಕ್ರಮ ಮಾಡುವಂತೆ ಪುಸಲಾಯಿಸುತ್ತಿರುವುದು ಸಮುದಾಯ ಸಮುದಾಯದವರ ಮದ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವುದು ಖಂಡನೀಯ.
ಕೇವಲ ಎರಡು ತಾಸಿನ ಪಥ ಸಂಚಲನ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವ ಮೂಲಕ ರಕ್ಕಸ ಮನಸ್ಥಿತಿಯನ್ನು ಈ ಕೃತ್ಯ ಬಿಂಬಿಸುತ್ತಿದೆ. ಒಬ್ಬ ಸಚಿವನಾಗಿ ಎಲ್ಲ ಜಾತಿ ಜನಾಂಗದವರನ್ನು ಸಮಾನವಾಗಿ ನೋಡಬೇಕಾದ ವ್ಯಕ್ತಿ ಸಮುದಾಯಗಳ ಮದ್ಯೆಯೇ ಬೆಂಕಿ ಹಚ್ಚುವ ರಾಕ್ಷಸಿ ಪ್ರವೃತ್ತಿಯನ್ನು ಬಿಂಬಿಸುತ್ತಿರುವುದು ಈ ಘಟನೆಯಿಂದ ಸಾಬೀತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ಸೋನಿಯಾ, ರಾಹುಲಗಾಂದಿಯನ್ನು ಮೆಚ್ಚಿಸಿ ಉಪಮುಖ್ಯಮಂತ್ರಿಯಾಗಲು ಇಂತಹ ಮನೆ ಮುರುಕ ಕೆಲಸಕ್ಕೆ ಕೈಹಾಕಿರುವುದು ಸರಿಯಲ್ಲ, ಇದರ ಪರಿಣಾಮವನ್ನು ಮುಂಬರುವ ಚುನಾವಣೆಯಲ್ಲಿ ಚಿತ್ತಾಪುರದ ಜನತೆ ಸರಿಯಾಗಿಯೇ ಬುದ್ಧಿಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಎಲ್ಲ ಜಾತಿ ಜನಾಂಗ ಸಂಘ ಸಂಸ್ಥೆಗಳಿಗೆ ಸಂವಿಧಾನದತ್ತ ಹಕ್ಕು ಇದೆ. ಎಲ್ಲರೂ ತಮ್ಮ ತಮ್ಮ ಕಾರ್ಯಕ್ರಮಗಳನ್ನು ಮಾಡಲು ಸ್ವತಂತ್ರ ಕೊಡಲಾಗಿದೆ. ಆದರೆ ಈ ಘಟನೆಯಿಂದ ಸ್ವತಂತ್ರ ಹರಣ ಮಾಡುವ ಕೆಲಸವನ್ನು ಒಬ್ಬ ಮಂತ್ರಿಯಾಗಿ ಮಾಡುತ್ತಿರುವುದು ಹಿಂದುಳಿದ ಈ ಕಲ್ಯಾಣ ಕರ್ನಾಟಕವನ್ನು ಮತ್ತೆ ಹದಗೆಟ್ಟ ಹೈದ್ರಾಬಾದ್ ಕರ್ನಾಟಕ ಮಾಡಲು ಹೊರಟಂತಿದೆ ರಜಾಕರ ಮುಖಂಡನಂತೆ ಸಚಿವ ಪ್ರಿಯಾಂಕ್ ಖರ್ಗೆ ವರ್ತಿಸುತ್ತಿರುವುದು ಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

