Oplus_0

ಇಂಗಳಗಿ ಗ್ರಾಮದಲ್ಲಿ ಅಕ್ರಮ ಮರಳು ಸಂಗ್ರಹಣೆ ಮತ್ತು ಸಾಗಾಣಿಕೆಗಾಗಿ ಅನುಕೂಲ ಮಾಡಿಕೊಟ್ಟ ರೈತರ ಜಮೀನು ಸರ್ಕಾರದ ವಶಕ್ಕೆ: ತಹಸೀಲ್ದಾರ್ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಇಂಗಳಗಿ ಗ್ರಾಮದ ಸ.ನ೦. 9/2 ಮತ್ತು 10 ರ ಕಬ್ಜೆದಾರ ರೈತರು ಕಾಗಿಣಾ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಂಗ್ರಹಣೆ ಮತ್ತು ಸಾಗಾಣಿಕೆಗಾಗಿ ಅನುಕೂಲ ಮಾಡಿಕೊಟ್ಟ ಪರಿಣಾಮವಾಗಿ ಈ ಜಮೀನಿನ ಪಹಣಿ ಕಾಲಂ 11 ರಲ್ಲಿ ಕರ್ನಾಟಕ ಸರ್ಕಾರ ಎಂದು ನಮೂದಿಸಿ ಆದೇಶಿಸಲಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

ತಾಲೂಕಿನ ಇಂಗಳಗಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸ.ನಂ 9/1, 9/2 ಮತ್ತು 10 ರ ಜಮೀನಿನಲ್ಲಿ ಕಳೆದ ಕೆಲವು ದಿನಗಳಿಂದ ಯಾವುದೇ ಸರ್ಕಾರಿ ಅನುಮತಿ ಅಥವಾ ಗಣಿಗಾರಿಕೆ ಪರವಾನಗಿ ಇಲ್ಲದೆ ಅಕ್ರಮ ಮರಳು ಗಣಿಗಾರಿಕೆ ಹಾಗೂ ಮರಳು ದಾಸ್ತಾನು ಮಾಡುತ್ತಿರುವ ಕುರಿತು ದೂರು ಹಾಗೂ ನಾಲವಾರ ಕಂದಾಯ ನಿರೀಕ್ಷಕರ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇಂಗಳಗಿ ಗ್ರಾಮದ ಸ.ನಂ ಜಮೀನು ಕಾಗಿಣಾ ನದಿಗೆ ಹೊಂದಿಕೊಂಡಿದ್ದು ನದಿ ಪಾತ್ರದಿಂದ ಮರಳನ್ನು ಅಕ್ರಮವಾಗಿ ಎತ್ತಿ, ಸ.ನಂ ರ ಜಮೀನಿನಲ್ಲಿ ಪಟ್ಟೇದಾರ ಮಲ್ಲಿಕಾರ್ಜುನ ಮಲ್ಲಪ್ಪ ತಳವಾರ ಅಕ್ರಮವಾಗಿ ದಾಸ್ತಾನು (Stocking) ಮಾಡಲಾಗಿದೆ. ಈ ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ಆದಾಯ ನಷ್ಟವಾಗುತ್ತಿರುವುದಲ್ಲದೆ, ಸ್ಥಳೀಯ ಪರಿಸರಕ್ಕೆ, ಅಂತರ್ಜಲ ಮಟ್ಟಕ್ಕೆ ಹಾಗೂ ಗ್ರಾಮದ ರಸ್ತೆಗಳಿಗೆ ತೀವ ಹಾನಿಯಾಗುತ್ತಿದೆ ಈ ಮರಳನ್ನು ವಿವಿಧೆಡೆಗೆ ಅಕ್ರಮವಾಗಿ ಸಾಗಾಟ ಮಾಡಲು ಪಕ್ಕದ ಜಮೀನು ಇಂಗಳಗಿ ಗ್ರಾಮದ ಸ.ನಂ 10 ರಲ್ಲಿ ಅನಧಿಕೃತವಾಗಿ ರಸ್ತೆ ನಿರ್ಮಾಣಮಾಡಲಾಗಿರುತ್ತದೆ. ಆದ್ದರಿಂದ ಅಕ್ರಮ ಮರಳು ಗಣಿಗಾರಿಕೆ ಹಾಗೂ ಮರಳು ದಾಸ್ತಾನು ಮಾಡುತ್ತಿರುವ ಇಂಗಳಗಿ ಗ್ರಾಮದ ಸ.ನಂಗಳ ಮತ್ತು ಈ ಮರಳನ್ನು ವಿವಿಧಡೆಗೆ ಅಕ್ರಮವಾಗಿ ಸಾಗಾಟ ಮಾಡಲು ಪಕ್ಕದ ಜಮೀನಿನಲ್ಲಿ ಅನಧಿಕೃತವಾಗಿ ರಸ್ತೆ ನಿರ್ಮಾಣಮಾಡಿರುವ ಇಂಗಳಗಿ ಗ್ರಾಮದ ಸ.ನಂ 10 ರ ಪಹಣಿ ಪತ್ರಿಕೆ ಕಾಲಂ ನಂ. 11 ರಲ್ಲಿ “ಕ.ಭೂ.ಕಂ. ಕಾಯ್ದೆ ಕಲಂ 95, 96 ರಡಿ ಭೋಜಾ ನಮೂದಿಸಲು ಯೋಗ್ಯವಿರುತ್ತದೆಂದು ವರದಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಸದರಿ ವಿಚಾರಣೆಯನ್ನು ಮುಕ್ತಾಯಗೊಳಿಸಿ, ಇಂಗಳಗಿ ಗ್ರಾಮದ ಸ.ನಂ:9/*/2 & 10/*/* ಜಮೀನಿನ ಪಹಣಿ ಕಾಲಂ 11 ರಲ್ಲಿ ಕ.ಭೂ.ಕಂ. ಕಾಯ್ದೆ 1964 ರ ನಿಯಮಗಳಡಿಯಲ್ಲಿ ಕರ್ನಾಟಕ ಸರ್ಕಾರ ಎಂದು ನಮೂದಿಸಲು ಆದೇಶಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

“ಚಿತ್ತಾಪುರ ತಾಲೂಕಿನ ರೈತರಲ್ಲಿ ಕೇಳಿಕೊಳ್ಳುವುದೇನಂದರೆ ಅಕ್ರಮ ಮರಳು ಸಂಗ್ರಹಣೆ ಮತ್ತು ಸಾಗಾಣಿಕೆಗೆ ನಿಮ್ಮ ಜಮೀನಿನಲ್ಲಿ ಅವಕಾಶ ನೀಡಿದ್ದು ಕಂಡು ಬಂದರೆ ನಿಯಮಾನುಸಾರ ಪರಿಶೀಲನೆ ಮಾಡಿ ಕರ್ನಾಟಕ ಸರ್ಕಾರ ಎಂದು ನಮೂದಿಸಲಾಗುವುದು. ಪಹಣಿಯಲ್ಲಿ ಕರ್ನಾಟಕ ಸರ್ಕಾರ ನಮೂದು ಆದರೆ ಇನ್ಮುಂದೆ ಸರ್ಕಾರದ ಮತ್ತು ಬ್ಯಾಂಕಿನ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ”.-ನಾಗಯ್ಯ ಹಿರೇಮಠ ತಹಸೀಲ್ದಾರ್ ಚಿತ್ತಾಪುರ.

Spread the love

Leave a Reply

Your email address will not be published. Required fields are marked *

error: Content is protected !!