ಕಲಬುರಗಿಯಲ್ಲಿ ನಾಳೆ ನಡೆಯುವ ಕೋಲಿ ಸಮಾಜದ ಬೃಹತ್ ಪ್ರತಿಭಟನೆ ಹಿಂದಕ್ಕೆ ಪಡೆದಿಲ್ಲ | ಹೆಚ್ಚಿನ ಸಂಖ್ಯೆಯಲ್ಲಿ ಬಂಧುಗಳು ಭಾಗವಹಿಸುವಂತೆ : ಎಮ್ಮೆನೋರ್ ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸ್ವಾಭಿಮಾನಿ ಕೋಲಿ ಸಮಾಜದ ವತಿಯಿಂದ ಕೋಲಿ, ಕಬ್ಬಲಿಗ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಡಿ.29 ರಂದು ನಾಳೆ ಕಲಬುರಗಿ ಜಿಲ್ಲೆಯಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಯಾರ ಮಾತಿಗೂ, ಸುಳ್ಳು ವದಂತಿಗೆ ಕಿವಿಗೊಡದೆ ಹೆಚ್ಚಿನ ಸಂಖ್ಯೆಯಲ್ಲಿ ಕೋಲಿ ಸಮಾಜದ ಸ್ವಾಭಿಮಾನಿ ಬಂಧುಗಳು ಭಾಗವಹಿಸಬೇಕು ಎಂದು ಸಮಾಜದ ಹಿರಿಯ ಮುಖಂಡ ಮಲ್ಲಿಕಾರ್ಜುನ ಎಮ್ಮೆನೋರ್ ಕರೆ ನೀಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ನಡೆಯಲಿರುವ ಪ್ರತಿಭಟನೆ ಯಾವುದೇ ಒಂದು ಸರ್ಕಾರದ, ವ್ಯಕ್ತಿಯ ಅಥವಾ ರಾಜಕೀಯದ ವಿರುದ್ಧ ಅಲ್ಲ, ಕೋಲಿ ಸಮಾಜದ ನ್ಯಾಯಕ್ಕಾಗಿ ಹಾಗೂ ಹಕ್ಕಿಗಾಗಿ ಸ್ವಾಭಿಮಾನದಿಂದ ಹಾಗೂ ಪಕ್ಷಾತೀತವಾಗಿ ನಡೆಯುವ ಹೋರಾಟವಾಗಿದ್ದು, ಕೋಲಿ ಸಮಾಜ ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದೆ ಹೀಗಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಸಮಾಜಕ್ಕೆ ನ್ಯಾಯ ನೀಡಬೇಕು ಎಂಬುದು ನಮ್ಮ ಹೋರಾಟದ ಉದ್ದೇಶ ಎಂದು ತಿಳಿಸಿದ್ದಾರೆ.
ನಾಳೆ ನಡೆಯುವ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಹೀಗಾಗಿ ಹೋರಾಟದಲ್ಲಿ ಯಾರೂ ಭಾಗವಹಿಸಬಾರದು ಎಂದು ಸಮಾಜದ ಕೆಲ ಮುಖಂಡರು ಹೇಳಿಕೆ ನೀಡಿದ್ದಾರೆ ಅವರಿಗೆ ನಾಚಿಕೆಯಾಗಬೇಕು ಎಂದು ತಿರುಗೇಟು ನೀಡಿದ್ದಾರೆ.
ಪ್ರತಿಭಟನೆ ಮತ್ತು ಹೋರಾಟವನ್ನು ಹತ್ತಿಕ್ಕುವ ಕೆಲಸ ಯಾರೂ ಮಾಡಬಾರದು. ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲುವುದಿಲ್ಲ ಸ್ವಾಭಿಮಾನದ ಸಿಂಹ ದಿ.ವಿಠಲ್ ಹೇರೂರು ಹಚ್ಚಿದ ದೀಪ ಯಾವತ್ತೂ ಆರುವುದಿಲ್ಲ. ಹೀಗಾಗಿ ಸಹಸ್ರ ಸಂಖ್ಯೆಯಲ್ಲಿ ಕೋಲಿ ಸಮಾಜದ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಮ್ಮೆನೋರ್ ಅವರು ಮನವಿ ಮಾಡಿದ್ದಾರೆ.

