ಗೋವಿಂದರಾಜ್ ಸಿ ಸುರಪುರಕರ್ ರವರ ಅವಳಿ ಕೃತಿಗಳ ಲೋಕಾರ್ಪಣೆ | ಇನ್ನೊಬ್ಬರ ಬೆಳವಣಿಗೆಯನ್ನು ಸಹಿಸುವ ಗುಣವುಳ್ಳ ವ್ಯಕ್ತಿಯೇ ನಿಜವಾದ ಸಾಹಿತಿ: ಈಶ್ವರ್ ಕಟ್ಟಿಮನಿ
ನಾಗಾವಿ ಎಕ್ಸಪ್ರೆಸ್
ಶಹಾಪುರ: ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಬೆಳವಣಿಗೆಯನ್ನು ಸಹಿಸುವ ಗುಣವುಳ್ಳ ವ್ಯಕ್ತಿಯೇ ನಿಜವಾದ ಸಾಹಿತಿ ಎಂದು ಹಿರಿಯ ಸಾಹಿತಿ ಈಶ್ವರ್ ಕಟ್ಟಿಮನಿ ಕಲಬುರ್ಗಿಯವರು ಅಭಿಪ್ರಾಯಪಟ್ಟರು.
ತಾಲೂಕಿನ ಭೀಮರಾಯನ ಗುಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗೋವಿಂದರಾಜ್ ಸಿ.ಸುರಪುರಕರ್ ರವರ ಅವಳಿ ಕೃತಿಗಳ ಲೋಕಾರ್ಪಣೆ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹೇಗೆ ಕುರಿತು ವಿಶೇಷ ಕಾರ್ಯಗಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಒಬ್ಬ ಕವಿ ತನ್ನ ಕಾಲಘಟ್ಟದಲ್ಲಿ ತಾನು ಅನುಭವಿಸುತ್ತಿರುವ ದುಃಖ ದುಮ್ಮಾನಗಳನ್ನು ಮತ್ತು ಸಾಮಾಜಿಕ ತಾರತಮ್ಯವನ್ನು ಅರ್ಥ ಮಾಡಿಕೊಂಡು ಸಮಾಜಕ್ಕೆ ಪರಿಚಯಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಕವಿಯದಾಗಿದೆ. ಕವಿ ತಾನು ಅನುಭವಿಸಿ ಬರೆದ ಎಲ್ಲಾ ವಿಚಾರಗಳು, ಸವಾಲುಗಳು,ಸಮಸ್ಯೆಗಳು ಆಲೋಚನೆಗಳು ಪ್ರತಿಯೊಬ್ಬ ಓದುಗನಿಗೂ ಈ ಎಲ್ಲಾ ವಿಚಾರಗಳು ಕೂಡ ನನ್ನವು ಎಂದು ಎನಿಸಿದಾಗ ಕವಿಯಲ್ಲಿ ಸಾರ್ಥಕ ಭಾವನೆ ಮೂಡುತ್ತದೆ ಎಂದು ಯುವಕವಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಕ್ಕಾವೋ ನಕ್ಷತ್ರ ಹನಿ ಗವಿತೆ ಕೃತಿಯನ್ನು ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರನಾಥ್ ಹೊಸಮನಿ ಮತ್ತು ನಕ್ಕಾವೋ ನೋವುಗಳು ಕವನ ಸಂಕಲನ ಕೃತಿಯನ್ನು ಸುರಪುರ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಬಲಭೀಮರಾಯ ದೇಸಾಯಿ ರವರು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಈ ಅವಳಿ ಕೃತಿಗಳ ಪರಿಚಯವನ್ನು ಹಿರಿಯ ಸಾಹಿತಿ ಡಾ. ಗೋವಿಂದರಾಜ್ ಮತ್ತು ಖಜನಾಧಿಕಾರಿ ಡಾ. ಮೋನಪ್ಪ ಶಿರವಾಳ ರವರು ಪರಿಚಯಿಸಿ ಗೋವಿಂದರಾಜರ ಆಲೋಚನೆ ಆತನಲ್ಲಿನ ಬರವಣಿಗೆ ಸಾಮರ್ಥ್ಯವನ್ನು ಮೆಚ್ಚುವಂಥದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೃತಿ ಲೋಕಾರ್ಪಣೆ ನಂತರ ಭೀಮಪ್ಪ ಪೀರಾಪುರ್ ಮತ್ತು ಶಿವಾನಂದ ದೋರನಹಳ್ಳಿ ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಭಯ ನಿವಾರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ದೇವಿಂದ್ರಪ್ಪ ಮಡಿವಾಳಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕರಾದ ಸಾಯಬಣ್ಣ ಮೆತ್ರೆ, ಸಿದ್ದಪ್ಪ ಒಡೆಯರ್, ಭೀಮರೆಡ್ಡಿ ಪಾಟೀಲ್, ಗುರುನಾಥ ದೇಸಾಯಿ, ಸಂತೋಷ್ ಜುನ್ನ, ಹನುಮಂತ್ರಾಯ ಗೌಡ ಪಾಟೀಲ್, ಧರ್ಮನಗೌಡ ಮತ್ತು ಸಾಹಿತಿಗಳಾದ ಆಮ್ಲಯ್ಯ ಮಡ್ನಾಳ್, ಈರಣ್ಣ ಸಾಹಿತ್ಯಗಾರ ಬೀರನೂರ್, ಗೌಡಪ್ಪ ಗೌಡ ಪರಿವಾಣ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಲೇಖಕ ಗೋವಿಂದರಾಜ್ ಸಿ ಸುರಪುರ ರವರ ದಂಪತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಶಹಾಪುರ ಮತ್ತು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಸುರೇಶ್ ಅರುಣಿ ಸ್ವಾಗತಿಸಿದರೆ ಮಡಿವಾಳಪ್ಪ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

