ರಾಜೇಶ್ವರಿ ಸಾಹು ಅವರ ಅಭಿನಂದನಾ ಸಮಾರಂಭ | ಸಾಧಿಸುವ ಛಲ ಇದ್ದರೆ ಗುರಿ ಮುಟ್ಟಲು ಸಾಧ್ಯ: ತೇಗಲತಿಪ್ಪಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಪ್ರತಿಯೊಬ್ಬರು ಯಶಸ್ವಿ ಜೀವನ ನಡೆಸಬೇಕಾದರೆ, ಸಾಧಿಸುವ ಛಲ ಹೊಂದಿದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಕನ್ನಡ ಭವನದಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ವಿಶ್ವ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಕು. ರಾಜೇಶ್ವರಿ ಸಾಹು ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಜನ ಪ್ರತಿಭಾವಂತರಿದ್ದಾರೆ. ಆದರೆ ಅವರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇಂದು ಅವಕಾಶ ಸೃಷ್ಟಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವವರಲ್ಲಿ ರಾಜೇಶ್ವರಿ ಸಾಹು ಮುಂಚೂಣಿಯಲ್ಲಿದ್ದಾರೆ. ಅವರಲ್ಲಿನ ಸಾಮಾಜಿಕ ಕಳಕಳಿ, ವೃತ್ತಿ ಬದ್ಧತೆ ಹಾಗೂ ಸೇವಾ ಮನೋಭಾವಗಳಿಂದ ನಾಡಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಬರುವ ದಿನಗಳಲ್ಲಿ ಅವರ ಸೇವೆ ದೇಶದುದ್ದಕ್ಕೂ ಪಸರಿಸಲಿ ಎಂದು ಹಾರೈಸಿದರು.
ಜಿಪಂ ಮಾಜಿ ಸದಸ್ಯ ಶರಣಗೌಡ ಪಾಟೀಲ ಮಾತನಾಡಿ, ಪಂಚಾಯತ್ ರಾಜ್ ಇಲಾಖೆಯಲ್ಲಿ ಜನಪರ ಸೇವೆ ಸಲ್ಲಿಸುವ ಮೂಲಕ ಉತ್ತಮ ಆಡಳಿತಗಾರರೆಂದು ರಾಜೇಶ್ವರಿ ಸಾಹು ಅವರು ಗುರುತಿಸಿಕೊಂಡಿದ್ದಾರೆ. ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಸತತ ಪರಿಶ್ರಮದೊಂದಿಗೆ ಸಾಧನೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಸೇವೆ ಜನರಿಗೆ ದೊರೆಯಲಿ ಎಂದು ಹೇಳಿದರು.
ರೇಣುಕಾ ಡಾಂಗೆ ಅವರು, ಪ್ರಶಸ್ತಿ ಸ್ವೀಕರಿಸಿದ ಸಾಹು ಅವರನ್ನು ಕೊಂಡಾಡಿದರು. ಮುಖಂಡರಾದ ಸುಭಾಶ ಮುರುಡ, ಬಸವರಾಜ ಬಿರಬಿಟ್ಟೆ ಹಾಗೂ ಮತ್ತಿತರರು ಭಾಗವಹಿಸಿದರು. ನಂತರ ಕು.ರಾಜೇಶ್ವರ ಸಾಹು ಅವರಿಗೆ ಸತ್ಕರಿಸಿ ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿದ ಕು.ರಾಜೇಶ್ವರಿ ಸಾಹು ಮಾತನಾಡಿ, ಬಡತನದಲ್ಲಿದ್ದರೂ ಓದು ಮಾತ್ರ ನಿಲ್ಲಿಸದೇ ಪಿಎಸ್ಐ ಆಗುವ ಕನಸ್ಸು ಕಂಡಿದ್ದೆ. ಆದರೆ ಕನಸು ನನಸಾಗದಿದ್ದರೂ ಛಲದಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವೆ. ಇದಕ್ಕೆ ಪಾಲಕರು, ಹಿರಿಯರ ಪ್ರೋತ್ಸಾಹ ಕಾರಣವೆಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಿವರಾಜ ಅಂಡಗಿ, ಶರಣರಾಜ ಚಪ್ಪರಬಂದಿ, ಧರ್ಮಣ್ಣ ಎಚ್ ಧನ್ನಿ, ರಾಜೇಂದ್ರ ಮಾಡಬೂಳ ಇತರರಿದ್ದರು.

